ಬೆಂಗಳೂರು : ಕಳೆದ ಮೂರು ದಿನಗಳಿಂದ ಕರ್ನಾಟಕದಲ್ಲಿ ಫೋನ್ ಕದ್ದಾಲಿಕೆ ಕುರಿತು ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ. ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, “ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಗೆ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಒತ್ತಾಯ ಮಾಡಿದ್ದರು. ಆದ್ದರಿಂದ ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ” ಎಂದು ಹೇಳಿದರು.
ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಶಾಸಕರು, ಈಗ ಅನರ್ಹಗೊಂಡಿರುವ ಶಾಸಕರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಇದು ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ಫೋನ್ ಕದ್ದಾಲಿಕೆ ಬಗ್ಗೆ ಎಚ್‍ಡಿಕೆ ಅವರನ್ನ ಆರೋಪಿಸಲಾಗಿತ್ತು, ಅದ್ದರಿಂದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ‘ಮುಖ್ಯಮಂತ್ರಿ ಅಧಿಕಾರ ಶಾಶ್ವತವಲ್ಲ ಎಂದು ಪದೇ ಪದೇ ಹೇಳುತ್ತಿದ್ದವನು ನಾನು. ಈ ಕುರ್ಚಿಗಾಗಿ ಟೆಲಿಫೋನ್ ಕದ್ದಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ. ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು’ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದರು.
ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂತಾದ ನಾಯಕರು ಸರ್ಕಾರ ಫೋನ್ ಟ್ಯಾಪಿಂಗ್ ಬಗ್ಗೆ ತನಿಖೆಯಾಗಬೇಕು ಎಂದು ಆರೋಪಿಸಿದ್ದರು, ಅದರಂತೆ ಇದೀಗ ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐಗೆ ಅಂಗಳದಲ್ಲಿದೆ.