Tuesday, January 21, 2025
ಸುದ್ದಿ

ರಾಮಚಂದ್ರಾಪುರ ಮಠದಲ್ಲಿ ತ್ಯಾಗ ಪರ್ವ: ಸಾವಿರ ಭಕ್ತರಿಂದ ಸರಳ ಜೀವನ ಪ್ರತಿಜ್ಞೆ – ಕಹಳೆ ನ್ಯೂಸ್

ಬೆಂಗಳೂರು : ಶ್ರೀರಾಮಚಂದ್ರಾಪುರ ಮಠದ ಸಾವಿರಕ್ಕೂ ಹೆಚ್ಚು ಶಿಷ್ಯ ಭಕ್ತರು ಅದ್ದೂರಿ- ಆಡಂಬರದ ಜೀವನಕ್ಕೆ ವಿದಾಯ ಹೇಳಿ ಭಾನುವಾರ ಸರಳ ಜೀವನದ ಪ್ರತಿಜ್ಞೆ ಕೈಗೊಂಡರು.

ತಕ್ಷಶಿಲಾ ವಿಶ್ವವಿದ್ಯಾನಿಲಯದ ಪುನರವತರಣದ ಮಹಾಸಂಕಲ್ಪವಾಗಿ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾರಾಮಾಯಣದ ಅಂಗವಾಗಿ ಇಲ್ಲಿನ ಗಿರಿನಗರ ರಾಮಾಶ್ರಮದಲ್ಲಿ ನಡೆದ ತ್ಯಾಗ ಪರ್ವದಲ್ಲಿ ನೂರಾರು ಮಂದಿ ದುಶ್ಚಟ- ವ್ಯಸನ, ಜೀವನಕ್ಕೆ ಅನಿವಾರ್ಯವಲ್ಲ ಎನ್ನುವ ವಸ್ತುಗಳನ್ನು ತ್ಯಜಿಸಿದರು. ಹಲವು ಮಂದಿ ಚಿನ್ನ, ವಜ್ರಾಭರಣಗಳನ್ನು ಉದ್ದೇಶಿತ ವಿಶ್ವವಿದ್ಯಾಪೀಠಕ್ಕೆ ದೇಣಿಗೆಯಾಗಿ ಸಮರ್ಪಿಸಿದರು.
ಧಾರಾ ರಾಮಾಯಣ ಪ್ರವಚನವು ಪಾದುಕಾ ಪಟ್ಟಾಭಿಷೇಕ ಘಟ್ಟ ತಲುಪಿದ ಹಿನ್ನೆಲೆಯಲ್ಲಿ, ಶ್ರೀರಾಮ ಹಾಗೂ ಭರತನ ರಾಜ್ಯತ್ಯಾಗವನ್ನು ತ್ಯಾಗಪರ್ವವಾಗಿ ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀರಾಮ ಹಾಗೂ ಭರತರು ಬದುಕಿ ತೋರಿಸಿದ ತ್ಯಾಗಜೀವನ ಹಾಗೂ ಸರಳ ಜೀವನ, ಸಮಾಜದ ಪ್ರತಿಯೊಬ್ಬರೂ ಅನುಸರಿಸಬಹುದಾದ ಆದರ್ಶ ಎಂದು ಹೇಳಿದರು.

“ಗುರುಗಳ ಜೋಳಿಗೆಗೆ ವ್ಯಸನಗಳನ್ನು ಹಾಕಿ ಬಿಟ್ಟರೆ ನಷ್ಟವಿಲ್ಲ ಎನ್ನಬಹುದಾದ ವಸ್ತುಗಳನ್ನು ತ್ಯಜಿಸಿ, ದುಂದುವೆಚ್ಚ ಬಿಡಿ. ಅದ್ದೂರಿ- ಆಡಂಬರಕ್ಕೆ ಕಡಿವಾಣ ಹಾಕಿ ಸರಳ ಜೀವನಕ್ಕೆ ನಾಂದಿ ಹಾಡಿದಾಗ ಇಡೀ ದೇಶ ರಾಮರಾಜ್ಯವಾಗುತ್ತದೆ” ಎಂದು ಬಣ್ಣಿಸಿದರು.

ನಮ್ಮ ಕಂಟಕ, ದುಃಖ, ಕ್ಲೇಶಗಳನ್ನು ಮಹಾತ್ಮರು ಆವಾಹಿಸಿಕೊಳ್ಳುವುದರಿಂದ ಅವರು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ರಾಮ- ಭರತರನ್ನು ಕೂಡಾ ಇಂಥ ಸಂಕಷ್ಟಗಳು ಬಿಡಲಿಲ್ಲ. ಇಷ್ಟಾಗಿಯೂ ತಮ್ಮ ಆದರ್ಶವನ್ನು ಬಿಡದೇ ಸಮಾಜಕ್ಕೆ ತ್ಯಾಗದ ದೊಡ್ಡ ಸಂದೇಶ ನೀಡಿದರು ಎಂದು ಅಭಿಪ್ರಾಯಪಟ್ಟರು.

ರಾಮನಿಗೂ ತಕ್ಷಶಿಲಾ ವಿಶ್ವವಿದ್ಯಾಲಯಕ್ಕೂ ಅವಿನಾಭಾವ ಸಂಬಂಧ ಇದೆ. ತಕ್ಷಶಿಲೆ ವಿವಿ ಮೂಲಕ ಭರತ ಸಂಸ್ಕೃತಿ ಮತ್ತೆ ತಲೆ ಎತ್ತಿ ನಿಂತಿತು. ಇದೀಗ ಅಂಥ ತಕ್ಷಶಿಲಾ ವಿವಿಯ ಪುನರವತರಣದ ಕಾಲ ಮತ್ತೆ ಸನ್ನಿಹಿತವಾಗಿದೆ. ಉದ್ದೇಶಿತ ವಿವಿ ಇಂಥ ನೂರಾರು- ಸಾವಿರಾರು ಚಲಿಸುವ ವಿಶ್ವವಿದ್ಯಾನಿಲಯಗಳನ್ನು ರೂಪಿಸಿ ಭಾರತವನ್ನು ರಾಮರಾಜ್ಯವಾಗಿ ಪರಿವರ್ತಿಸಲು ನಾಂದಿ ಹಾಡಲಿದೆ ಎಂದರು.

ಧರ್ಮ ಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ನೇತೃತ್ವದಲ್ಲಿ ನೂತನ ರಜತಪೀಠದಲ್ಲಿ ಶ್ರೀರಾಮ ಪಾದುಕಾ ಪಟ್ಟಾಭಿಷೇಕ ವೈಭವದಿಂದ ನಡೆಯಿತು. 500ಕ್ಕೂ ಹೆಚ್ಚು ಭಕ್ತರು ಶ್ರೀರಾಮಪಾದುಕೆಗೆ ಸುವರ್ಣಾಭಿಷೇಕ ನೆರವೇರಿಸಿದರು. ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಕಾರ್ಯದರ್ಶಿ ನಾಗರಾಜ ಭಟ್, ಶ್ರೀಮಠದ ಶಾಸನತಂತ್ರ ಪದಾಧಿಕಾರಿಗಳು ಭಾಗವಹಿಸಿದ್ದರು.