ವಿಟ್ಲ: ಕಳೆದ ಹತ್ತು ವರ್ಷಗಳ ಹಿಂದೆ ಬಾವಿ ಕೆಲಸದಲ್ಲಿ ನಿರತರಾಗಿದ್ದ ಕರುಣಾಕರ ಪೂಜಾರಿ ನವಗ್ರಾಮ ಮಂಗಳಪದವು, ಇವರು ಆಕಸ್ಮಿಕವಾಗಿ ಬಾವಿಯ ಮೇಲಿನಿಂದ ಬಿದ್ದ ಕಾರಣ ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಹತ್ತು ವರ್ಷಗಳಿಂದಲೂ ಮಲಗಿದಲ್ಲೇ ಇದ್ದಾರೆ. ತನ್ನ ದೈನಂದಿನ ಚಟುವಟಿಕೆಗಳನ್ನು ಕೂಡ ಹಾಸಿಗೆಯಲ್ಲಿಯೇ ನಡೆಸುತ್ತಿದ್ದಾರೆ.
ಮನೆಯ ಆಧಾರ ಸ್ತಂಬವೇ ಕಳಚಿದಂತಾಗಿದೆ. ಪ್ರಸ್ತುತ ಇವರ ಚಿಕಿತ್ಸಾವೆಚ್ಚ, ಮೂರು ಹೆಣ್ಣುಮಕ್ಕಳ ಜವಾಬ್ದಾರಿಯನ್ನು ಇವರ ಧರ್ಮಪತ್ನಿ ನಿಭಾಯಿಸುತ್ತಿದ್ದಾರೆ. ಇವರು ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ನೆರವು ನೀಡಲೆಂದೇ ರೂಪುಗೊಂಡಿರುವಂತಹ ತಂಡ ಸ್ಪಂದನ ಗುರುತು ವಿಟ್ಲ. ಈ ತಂಡದ ಸದಸ್ಯರು ಕರುಣಾಕರ ಪೂಜಾರಿಯವರ ಪರಿಸ್ಥಿತಿಯನ್ನು ಪರಿಶೀಲಿಸಿ, ಆಗಸ್ಟ್ 18ರಂದು ಅವರ ಮನೆಗೆ ಭೇಟಿ ನೀಡಿ ಸ್ಪಂದನ ಗುರುತು ತಂಡದ ಹೆಸರಿನಲ್ಲಿ, 10,000 ರೂ ಚೆಕ್ಕನ್ನು ಹಸ್ತಾಂತರಿಸಿದರು.