ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಧ್ಯಾಕಾಲದಲ್ಲಿ ವಿಧಾನಸಭೆಯಲ್ಲಿ ತೀವ್ರ ಚರ್ಚೆ ನಡೆದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅನುಭವಿ ನಾಯಕರು ಕಾನೂನಿನ ಪುಸ್ತಕದ ಮೂಲೆ ಮೂಲೆಯಿಂದ ಅಂಶಗಳನ್ನು ಕೆದಕಿ ತಂದು ಪುಂಖಾನುಪುಂಖವಾಗಿ ಹೇಳುತ್ತಿದ್ದರೆ, ವಿರೋಧಪಕ್ಷದ ಸ್ಥಾನದಲ್ಲಿ ಕುಳಿತಿದ್ದ ಬಿಜೆಪಿ ನಾಯಕರು ಮಾತಿಲ್ಲದಂತೆ ಕುಳಿತಿದ್ದರು. ಆಗ ಉಳಿದ 104 ಶಾಸಕರ ಪರವಾಗಿ ಬ್ಯಾಟ್ ಬೀಸಿದವರು ತುಮಕೂರಿನ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿಎಸ್ ಮಾಧುಸ್ವಾಮಿ.
ಇಡೀ ವಿರೋಧಪಕ್ಷದ ಶಕ್ತಿಯಂತೆ ಮಾಧುಸ್ವಾಮಿ ಮಾತನಾಡಿದ್ದರು. ಕಾನೂನಿನ ಜ್ಞಾನವುಳ್ಳ ಮಾಧುಸ್ವಾಮಿ ಮಾತಿನ ವೈಖರಿಗೆ ಆಡಳಿತಪಕ್ಷದವರೂ ತಲೆದೂಗಿದ್ದರು. ಉತ್ತಮ ಸಂಸದೀಯಪಟುವಾಗಿ ಗುರುತಿಸಿಕೊಂಡ ಮಾಧುಸ್ವಾಮಿ ಅವರು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನುವುದು ಮೊದಲೇ ಖಾತ್ರಿಯಾಗಿತ್ತು.
ಆದರೆ, ಮೊದಲ ಬಾರಿಗೆ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವ ಉತ್ಸಾಹದಲ್ಲಿ ಅವರು ಯಡವಟ್ಟು ಮಾಡಿಕೊಂಡರು. ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸುವ ವೇಳೆ ಅವರು ‘ನಾನು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ’ ಎಂದು ಹೇಳುವ ಬದಲು, ‘ನಾನು ಮುಖ್ಯಮಂತ್ರಿಯಾಗಿ…’ ಎಂದು ಉಚ್ಚರಿಸಿ ಪೇಚಿಗೆ ಸಿಲುಕಿದರು.