ಬಂಟ್ವಾಳ: ಬಾಲ್ಯ ವಿವಾಹ ನಡೆಯಲು ಸಿದ್ಧತೆ ನಡೆಸುತ್ತಿದ್ದೆ ಎಂದು ಮಾಹಿತಿ ಪಡೆದ ಅಧಿಕಾರಿಗಳು ಮಧ್ಯಪ್ರವೇಶಿಸಿ ಮದುವೆಗೆ ಬ್ರೇಕ್ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಗಸ್ಟ್ 19 ರಂದು ಸೋಮವಾರ ನಾವೂರದ ಬಾಲಕಿ ಮತ್ತು ಮೂಡಬಿದಿರೆಯ ಯುವಕನ ಜೊತೆ ಮದುವೆಯ ಬಗ್ಗೆ ಪೂರ್ವತಯಾರಿ ನಡೆದಿತ್ತು.
ಆ ವೇಳೆ ಖಚಿತ ಮಾಹಿತಿಯ ಮೇಲೆ ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿ ಗಾಯತ್ರಿ ಕಂಬಳಿ, ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಸ್ಥಳೀಯ ಗ್ರಾ.ಪಂ.ಪಿ.ಡಿ.ಒ.ರಚನ್ ಕುಮಾರ್, ಗ್ರಾಮ ಕರಣೀಕ ಕುಮಾರ್, ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ಮನೆಗೆ ಬೇಟಿ ನೀಡಿದ ವೇಳೆ ನಿಶ್ಚಿತಾರ್ಥ ನಡೆಯುತ್ತಿತ್ತು.
ಹಾಗಾಗಿ ಅಪ್ರಾಪ್ತ ಬಾಲಕಿಗೆ ಮದುವೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ಬಗ್ಗೆ ಮನೆಯವರಿಗೆ ವಿಷಯ ತಿಳಿಸುತ್ತಿದ್ದಂತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಳಿಕ ಬಾಲಕಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡದಂತೆ ಮುಚ್ಚಳಿಕೆ ಮಾಡಿಕೊಂಡ ಬಗ್ಗೆ ಪಿ.ಡಿ.ಒ. ರಚನ್ ಕುಮಾರ್ ತಿಳಿಸಿದ್ದಾರೆ.