ಮಂಗಳೂರು: ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ವಿ.ಜಿ. ಅವರ ನಿಗೂಢ ಸಾವಿನ ಬಗ್ಗೆ ಎಫ್‍ಎಸ್‍ಎಲ್ ವರದಿ ತನಿಖಾಧಿಕಾರಿಗೆ ಸಲ್ಲಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸ್ ಆಯುಕ್ತರು ಇದನ್ನು ಅಲ್ಲಗಳೆದಿದ್ದಾರೆ.
ನಾಲ್ಕು ದಿನಗಳ ಹಿಂದೆಯೇ ಎಫ್‍ಎಸ್‍ಎಲ್ ವರದಿ ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ ‘ಅಂತಿಮ ವರದಿ ಇನ್ನೂ ಬಂದಿಲ್ಲ ಎಂಬುದಾಗಿ ತನಿಖಾಧಿಕಾರಿ ನನಗೆ ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ತಿಳಿಸಿದ್ದಾರೆ.
ಸಿದ್ಧಾರ್ಥ್ ಜು. 29ರಂದು ಸಂಜೆ ಉಳ್ಳಾಲ ಸೇತುವೆ ಬಳಿ ನಾಪತ್ತೆಯಾಗಿದ್ದು, ಜು. 31ರಂದು ಮೃತದೇಹ ನೇತ್ರಾವತಿ ನದಿಯಲ್ಲಿ ಸೇತುವೆಯಿಂದ 4.5 ಕಿ.ಮೀ. ದೂರ ಹೊೈಗೆ ಬಜಾರ್ ಐಸ್‍ಪ್ಲಾಂಟ್ ಬಳಿ ಪತ್ತೆಯಾಗಿತ್ತು.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಸಿದ್ಧಾರ್ಥ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿತ್ತು. ಎಫ್‍ಎಸ್‍ಎಲ್ ವರದಿ ಬಂದ ಬಳಿಕ ಸಿದ್ಧಾರ್ಥ್ ಸಾವಿಗೆ ನೈಜ ಕಾರಣ ಏನೆಂದು ಗೊತ್ತಾಗಲಿದೆ ಎಂದು ತಿಳಿಸಲಾಗಿತ್ತು.