ವಾಷಿಂಗ್ಟನ್ : ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಸಿದ್ಧರಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.
‘ಕಾಶ್ಮೀರವು ಅತ್ಯಂತ ಸಂಕೀರ್ಣ ಸ್ಥಳ. ಅಲ್ಲಿ ಹಿಂದೂಗಳಿದ್ದಾರೆ, ಮುಸ್ಲಿಮರು ಇದ್ದಾರೆ. ಅವರು ಜತೆಯಾಗಿ ಹೊಂದಿಕೊಂಡು ಹೋಗುತ್ತಿದ್ದಾರೆ ಎಂದು ನಾನು ಹೇಳಲಾರೆ. ಈಗ ಅಲ್ಲಿ ಆಗುತ್ತಿರುವುದು ಅದೇ’ ಎಂದು ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಾಶ್ಮೀರದಲ್ಲಿನ ಸನ್ನಿವೇಶ ಸ್ಫೋಟಕವಾದದ್ದು ಮತ್ತು ಸಂಕೀರ್ಣವಾದದ್ದು ಎಂದಿರುವ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟನ್ನು ಸರಿಪಡಿಸಲು ಮಧ್ಯಸ್ಥಿಕೆಯೋ ಅಥವಾ ಇನ್ನೇನಾದರೋ ಮಾಡಲು ಸಾಧ್ಯವಾದುದ್ದನ್ನು ಮಾಡುವುದಾಗಿ ಹೇಳಿದ್ದಾರೆ.
‘ನಾವು ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತಿದ್ದೇವೆ. ಈ ಎರಡೂ ದೇಶಗಳ ನಡುವೆ ಭಾರಿ ದೊಡ್ಡ ಸಮಸ್ಯೆಗಳಿವೆ. ಮಧ್ಯಸ್ಥಿಕೆ ಅಥವಾ ಬೇರೆ ರೀತಿಯಲ್ಲಿ ನಾನು ಹೆಚ್ಚಿನದ್ದನ್ನು ಮಾಡುತ್ತೇನೆ. ಅದು ಸಂಕೀರ್ಣ ಸ್ಥಿತಿ. ಅಲ್ಲಿ ಧರ್ಮದ ಕುರಿತು ಹೆಚ್ಚಿನ ಸವಾಲುಗಳಿವೆ. ಧರ್ಮ ಎನ್ನುವುದು ಸಂಕೀರ್ಣ ವಿಷಯ’ ಎಂದು ಟ್ರಂಪ್ ಹೇಳಿದ್ದಾರೆ.
ಇದಕ್ಕೂ ಮೊದಲು ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಇಮ್ರಾನ್ ಖಾನ್ ಅವರಿಗೆ ಕರೆ ಮಾಡಿ ಕಾಶ್ಮೀರ ವಿಚಾರದ ಕುರಿತು ಮಾತುಕತೆ ನಡೆಸಿದ್ದರು.
‘ಇಮ್ರಾನ್ ಖಾನ್ ಮತ್ತು ನರೇಂದ್ರ ಮೋದಿ ಅವರೊಂದಿಗೆ ನಿನ್ನೆ ಮಾತನಾಡಿದ್ದೇನೆ. ಅವರಿಬ್ಬರೂ ನನಗೆ ಉತ್ತಮ ಸ್ನೇಹಿತರು ಮತ್ತು ಮಹಾನ್ ವ್ಯಕ್ತಿಗಳು. ಇಬ್ಬರೊಂದಿಗೂ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ’ ಎಂದು ತಿಳಿಸಿದ್ದರು.