ಪುತ್ತೂರು: ವಿವೇಕಾನಂದ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಘಟಕ, ಐ.ಕ್ಯು.ಎ.ಸಿ. ಘಟಕ ಮತ್ತು ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ನಾಯಕತ್ವ ಕುರಿತ ತರಬೇತಿ ಕಾರ್ಯಕ್ರಮ ಮಂಗಳವಾರ ನಡೆಯಿತು.
ಉತ್ತಮ ನಾಗರೀಕನಾಗಲು ನಾಯಕತ್ವದ ಗುಣ ಅಗತ್ಯ. ಇದಕ್ಕೆ ಪ್ರತಿಯೊಬ್ಬ ವ್ಯಕ್ತಿಯು ಜ್ಞಾನ ಮತ್ತು ಧನಾತ್ಮಕ ಚಿಂತನೆಯೊಂದಿಗೆ ಸಮಾಜದಲ್ಲಿ ತನ್ನನ್ನು ಗುರುತಿಸಿಕೊಂಡಾಗ ಉನ್ನತ ಸ್ಥಾನಕ್ಕೇರಬಹುದು. ಅಂತೆಯೇ ಪ್ರತಿಯೊಬ್ಬ ನಾಗರೀಕನು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಹಾಗಿದ್ದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಸವಣೂರಿನ ಸರಕಾರಿ ಪದವಿಪೂರ್ವ ಕಾಲೇಜಿನ ಇಂಗ್ಲೀಷ್ ಭಾಷಾ ಉಪನ್ಯಾಸಕ ಪ್ರೊ.ಬಿ.ವಿ. ಸೂರ್ಯನಾರಾಯಣ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು. ಹೊಸ ವಿಷಯಗಳನ್ನು ಕಲಿಯುವ ಆಸಕ್ತಿಯ ಜೊತೆಗೆ ಉಳಿದವರಿಗೆ ಕಲಿಸುವ ಉತ್ಸಾಹ ತೋರುವವನು ಉತ್ತಮ ನಾಯಕನಾಗಲು ಸಾಧ್ಯ ಎಂದರು.
ವೇದಿಕೆಯಲ್ಲಿ ಐ.ಕ್ಯು.ಎ.ಸಿ. ಘಟಕದ ಸಂಯೋಜಕ ಡಾ. ಹೆಚ್.ಜಿ.ಶ್ರೀಧರ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಕಾರಂತ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ರೇಖಾ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಸಹಕಾರ್ಯದರ್ಶಿ ಲಿಖಿತಾ ವಂದಿಸಿದರು. ವಿದ್ಯಾರ್ಥಿನಿ ಮನೀಷಾ ಶೆಟ್ಟಿ ನಿರೂಪಣೆಗೈದರು.