ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಸಚಿವ ಪಿ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್ ಔಟ್ ನೊಟೀಸ್ ಜಾರಿಗೊಳಿಸಿದೆ.
ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿನ್ನೆ ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಮುಂದಿನ ಎರಡು ಗಂಟೆಗಳೊಳಗೆ ಸಿಬಿಐ ಮುಂದೆ ಹಾಜರಾಗುವಂತೆ ಚಿದಂಬರಂ ನಿವಾಸದ ಹೊರಗೆ ನೊಟೀಸ್ ಹಾಕಿದ ನಂತರವೂ ಅವರು ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.
ನಿನ್ನೆ ಸಿಬಿಐ ಅಧಿಕಾರಿಗಳ ತಂಡವೊಂದು ದೆಹಲಿಯ ಜೊರ್ ಬಾಗ್‍ನಲ್ಲಿರುವ ಚಿದಂಬರಂ ನಿವಾಸಕ್ಕೆ ಆಗಮಿಸಿತ್ತು. ಆದರೆ ಚಿದರಂಬರಂ ಅಲ್ಲಿರಲಿಲ್ಲ. ಅದಾದ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಕೂಡ ಚಿದಂಬರಂ ನಿವಾಸಕ್ಕೆ ಆಗಮಿಸಿತ್ತು, ಆಗಲೂ ಚಿದಂಬರಂ ಪತ್ತೆಯಾಗಲಿಲ್ಲ.
ಚಿದಂಬರಂ ದೇಶ ಬಿಟ್ಟು ಹೋಗುವ ಸಾಧ್ಯತೆಯಿರುವುದರಿಂದ ದೇಶದ ಎಲ್ಲಾ ಪ್ರಮುಖ ವಾಯು, ಬಂದರು ಮತ್ತು ಭೂ ನಿಲ್ದಾಣಗಳಿಗೆ ಜಾರಿ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ. ಚಿದಂಬರಂ ಅವರು ಈಗೆಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ, ಐಎನ್‍ಎಕ್ಸ್ ಮೀಡಿಯಾ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಅವರ ವಿರುದ್ಧ ತನಿಖೆ ಮಾಡುವ ಅವಶ್ಯಕತೆಯಿದೆ. ಈ ಸಂದರ್ಭದಲ್ಲಿ ಬಂಧನ ಭೀತಿಯಿಂದ ಅವರು ದೇಶ ಬಿಟ್ಟು ಹೋಗುವ ಸಾಧ್ಯತೆಯಿರುವುದರಿಂದ ಎಲ್ಲಾ ಕಡೆ ಕಣ್ಗಾವಲು ಇರಿಸುವಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ನಿನ್ನೆ ಸಂಜೆ ಚಿದಂಬರಂ ಅವರನ್ನು ದೆಹಲಿಯ ಅವರ ನಿವಾಸದಿಂದ ಇಡಿ ಮತ್ತು ಸಿಬಿಐ ಅಧಿಕಾರಿಗಳು ಬಂಧಿಸಲು ಬಂದಿದ್ದಾರೆಯೇ ಎಂದು ತಿಳಿದುಕೊಳ್ಳಲು ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಿದಾಗ ಎರಡೂ ಇಲಾಖೆಗಳ ಅಧಿಕಾರಿಗಳು ಯಾವುದೇ ಮಾಹಿತಿ ನೀಡಲಿಲ್ಲ. ಐಎನ್‍ಎಕ್ಸ್ ಮೀಡಿಯಾ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿದಂಬರಂ ಸಲ್ಲಿಸಿದ್ದ ಎರಡೂ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿನ್ನೆ ವಜಾಗೊಳಿಸಿತ್ತು.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಐಎನ್‍ಎಕ್ಸ್ ಮೀಡಿಯಾ ವಂಚನೆ ಪ್ರಕರಣದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಚಿದಂಬರಂ ಬಂಧನದಿಂದ ಮುಕ್ತವಾಗಿದ್ದರು. ಈ ಮಧ್ಯೆ ತಮ್ಮನ್ನು ಬಂಧಿಸದಂತೆ ಕೋರಿ ಚಿದಂಬರಂ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.