ಢಾಕಾ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ವಿಧಿ 370 ರದ್ಧತಿ ಭಾರತ ದೇಶದ ಆಂತರಿಕ ವಿಚಾರ ಎಂದು ಬಾಂಗ್ಲಾದೇಶ ಅಭಿಪ್ರಾಯಪಟ್ಟಿದೆ.
ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಅವರು ಬಾಂಗ್ಲಾದೇಶ ಪ್ರವಾಸದಲ್ಲಿರುವ ಹೊತ್ತಿನಲ್ಲೇ ಬಾಂಗ್ಲಾದೇಶ ಈ ಹೇಳಿಕೆ ನೀಡಿರುವುದು ಪ್ರಮುಖವಾಗಿದೆ. ಈ ಕುರಿತಂತೆ ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ವಿಧಿ 370 ರದ್ಧತಿ ವಿಚಾರ ಸಂಪೂರ್ಣ ಭಾರತದ ಆಂತರಿಕ ವಿಚಾರ.
ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಬೇಕಾದ ಯಾವುದೇ ನಿರ್ಣಯ ಕೈಗೊಳ್ಳುವ ಹಕ್ಕು ಭಾರತಕ್ಕಿದೆ. ನಾವೂ ಕೂಡ ಕಣಿವೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಯಾವುದೇ ನಿರ್ಣಯಕ್ಕೂ ನಮ್ಮ ಬೆಂಬಲವಿರುತ್ತದೆ ಎಂದು ಹೇಳಿದೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂಗೆ ಭೂತಾನ್, ಮಾಲ್ಡೀವ್ಸ್ ದೇಶಗಳು ಭಾರತಕ್ಕೆ ಬೆಂಬಲ ನೀಡಿದ್ದು, ನೇಪಾಳ ಮತ್ತು ಆಫ್ಘಾನಿಸ್ತಾನ ಈ ವಿಚಾರವನ್ನು ಇದು ದ್ವಿಪಕ್ಷೀಯ ವಿಚಾರ ಎಂದು ಹೇಳಿ ಅಡ್ಡಗೋಡೆಯ ದೀಪ ಇಡುವ ಕಾರ್ಯ ಮಾಡಿವೆ.