ಕಹಳೆ ನ್ಯೂಸ್ : ಸಮಾಜಕ್ಕೆ ಏನಾದರು ಸಹಾಯ ಮಾಡಬೇಕು ಎಂಬ ಆಶಯವನ್ನು ಹೊಂದಿದ್ದ ಮಧ್ಯಪ್ರದೇಶದ ಕಾಂತಿಯ 70 ವರ್ಷದ ವಿಧವೆಯೊಬ್ಬರು ತಮ್ಮ ಜೀವಮಾನದ ಎಲ್ಲಾ ಗಳಿಕೆಯನ್ನೂ ಗೋಶಾಲೆ ನಿರ್ಮಾಣ ಸೇರಿದಂತೆ ಇತರ ಕಾರ್ಯಕ್ಕೆ ದಾನ ಮಾಡಿ ದೊಡ್ಡತನ ಮೆರೆದಿದ್ದಾರೆ.
70 ವರ್ಷದ ಫೂಲ್‌ವತಿ ದಾನ ಧರ್ಮ ಮಾಡುವಷ್ಟು ದೊಡ್ಡ ಶ್ರೀಮಂತೆಯಲ್ಲ. ಮಗಳು ಮತ್ತು ಗಂಡನ್ನು ಕಳೆದುಕೊಂಡ ಬಳಿಕ 1982ರಲ್ಲಿ ಮಥುರಾಗೆ ಬಂದ ಇವರು ಬಂಕೆ ಬಿಹಾರಿ ದೇಗುಲದ ಹೊರಗಡೆ ಭಕ್ತರ ಚಪ್ಪಲಿಗಳನ್ನು ಕಾಯುತ್ತಾ ಹಣ ಸಂಗ್ರಹಿಸುತ್ತಿದ್ದರು.
ಇದೀಗ ಹೀಗೆ ಸಂಗ್ರಹವಾದ 40 ಲಕ್ಷ ರೂಪಾಯಿಗಳನ್ನು ವೃಂದಾವನದಲ್ಲಿ ಗೋಶಾಲೆ ಮತ್ತು ಧರ್ಮಶಾಲೆಯನ್ನು ನಿರ್ಮಿಸಲು ದಾನ ಮಾಡಿದ್ದಾರೆ. ಜಬಲ್‌ಪುರದಲ್ಲಿನ ತಮ್ಮ ಭೂಮಿಯನ್ನೂ ಮಾರಿ ಇವರು ದಾನ ಧರ್ಮ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮತ್ತಷ್ಟು ಹಣ ಗಳಿಸಿ ಅದನ್ನು ಬರ್ಸನದಲ್ಲಿ ಗೋಶಾಲೆ ನಿರ್ಮಿಸಲು ನೀಡಬೇಕು ಎಂಬ ಆಶಯವನ್ನು ಹೊಂದಿದ್ದಾರೆ.
ಶ್ರೀಕೃಷ್ಣನಿಗೆ ಗೌರವ ಅರ್ಪಿಸಲು ಗೋಶಾಲೆಗಳನ್ನು ನಿರ್ಮಿಸುವುದು ಒಂದು ಅದ್ಭುತ ವಿಧಾನ. ಅದಕ್ಕಾಗಿಯೇ ನಾನು ಗಳಿಸಿದ್ದನ್ನೆಲ್ಲಾ ಗೋಶಾಲೆ ನಿರ್ಮಾಣಕ್ಕೆ ನೀಡುತ್ತಿದ್ದೇನೆ. ಇನ್ನಷ್ಟು ದಿನ ಬದುಕಿದರೆ ಮತ್ತಷ್ಟು ಗಳಿಸಿ ಬರ್ಸನದಲ್ಲಿ ಗೋಶಾಲೆ ನಿರ್ಮಿಸುತ್ತೇನೆ ಎಂದು ಫೂಲ್‌ವತಿ ಹೇಳುತ್ತಾರೆ.
ಮಗನನ್ನು ಆಗಾಗ ಹೋಗಿ ನೋಡಿಕೊಂಡು ಬರುವ ಇವರು ಆತನೊಂದಿಗೆ ಇದ್ದು ಬಿಡುವ ಆಶಯವನ್ನು ಹೊಂದಿಲ್ಲ. ಬದಲಾಗಿ ವೃಂದಾವನದಲ್ಲಿ ಶಾಂತಿಯಿಂದ ಬದುಕಿ ಶ್ರೀಕೃಷ್ಣನ ಸೇವೆ ಮಾಡುವ ಆಶಯ ಹೊಂದಿದ್ದಾರೆ.
ವರದಿ : ಕಹಳೆ ನ್ಯೂಸ್