Recent Posts

Sunday, January 19, 2025
ರಾಜಕೀಯಸುದ್ದಿ

ಚಿದಂಬರಂ ಅರೆಸ್ಟ್ – ಗೇಟ್ ಹಾರಿ ನಿವಾಸದ ಪ್ರವೇಶಿಸಿದ ಇಡಿ, ಸಿಬಿಐ ಅಧಿಕಾರಿಗಳು – ಕಹಳೆ ನ್ಯೂಸ್

ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಲಂಚ ಸ್ವೀಕಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂರನ್ನು ಅವರ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಬರೋಬ್ಬರಿ 27 ಗಂಟೆಗಳ ಬಳಿಕ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪ್ರತ್ಯಕ್ಷರಾಗಿ ಸುದ್ದಿಗೋಷ್ಠಿ ನಡೆಸಿದ್ದ ಚಿದಂಬರಂ ಅವರು, ಆ ಬಳಿಕ ತಮ್ಮ ನಿವಾಸಕ್ಕೆ ತೆರಳಿದ್ದರು.

ಚಿದಂಬರಂ ಅವರು ನಿವಾಸಕ್ಕೆ ತೆರಳಿದ ಮಾಹಿತಿ ಲಭಿಸುತ್ತಿದಂತೆ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ನಿವಾಸಕ್ಕೆ ಆಗಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ಅವರ ನಿವಾಸ ಗೇಟ್ ಬಂದ್ ಆಗಿದ್ದ ಕಾರಣ ಅಧಿಕಾರಿಗಳು ನಿವಾಸದ ಎದುರಿನ ಗೇಟ್ ಹಾಗೂ ಕಾಂಪೌಡ್ ಜಿಗಿದು ನಿವಾಸವನ್ನು ಪ್ರವೇಶ ಮಾಡಿದ್ದರು. ಇಡಿ ಹಾಗೂ ಸಿಬಿಐ ಅಧಿಕಾರಿಗಳು ನಿವಾಸ ಪ್ರವೇಶ ಮಾಡುತ್ತಿದಂತೆ ಸ್ಥಳದಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಪೊಲೀಸರು ಕೂಡ ನಿವಾಸ ಎದುರು ಬೀಡು ಬಿಟ್ಟಿದ್ದರು. ಈ ವೇಳೆಗೆ ಇಡಿ ಅಧಿಕಾರಿಗಳು ಚಿದಂಬರಂ ಅವರನ್ನು ತಮ್ಮ ನಿವಾಸದಲ್ಲೇ ವಿಚಾರಣೆಗೆ ಒಳಪಡಿಸಿದ್ದರು. ಆ ಬಳಿಕ ಅವರನ್ನು ಸ್ವಲ್ಪ ಸಮಯದ ಬಳಿಕ ಬಂಧಿಸಿ ಅಧಿಕಾರಿಗಳು ಅವರನ್ನು ಕಾರಿನಲ್ಲಿ ಕರೆದುಕೊಂಡು ಸಿಬಿಐ ಕಚೇರಿಗೆ ಕರೆತಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಪ್ರಕರಣದಲ್ಲಿ ಆರೋಪಿ ಅಲ್ಲ. ನನ್ನನ್ನು ಹಾಗೂ ನನ್ನ ಮಗನನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನ ನಡೆಸಲಾಗಿದೆ. ಎಫ್‍ಐಆರ್ ನಲ್ಲೂ ನನ್ನ ಹೆಸರು ಇಲ್ಲ ಎಂದು ಆರೋಪಿಸಿದ್ದರು…

ಜಾಹೀರಾತು
ಜಾಹೀರಾತು
ಜಾಹೀರಾತು

ಎಐಸಿಸಿ ಕಚೇರಿಯಲ್ಲಿ ಚಿದಂಬರಂ ಅವರು ಆಗಮಿಸುವ ಮುನ್ನವೇ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಜಮಾವಣೆಯಾಗಿದ್ದರು. ಅಲ್ಲದೇ ಚಿದಂಬರಂ ಅವರು ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷರಾಗುತ್ತಿದಂತೆ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಕಚೇರಿಯತ್ತ ದೌಡಾಯಿಸಿದ್ದರು. ಆದರೆ ಅಧಿಕಾರಿಗಳು ಕಚೇರಿಯ ಒಳಗೆ ತೆರಳದಂತೆ ಪಕ್ಷದ ಕಾರ್ಯಕರ್ತರು ಮುಖ್ಯ ಬಾಗಿಲನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದು ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಹೈಡ್ರಾಮಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷದ ಎದುರು ಹೈಡ್ರಾಮ ನಡೆಯುತ್ತಿದ್ದರೆ ಸುದ್ದಿಗೋಷ್ಠಿ ನಡೆಸಿ ಬಳಿಕ ನೇರ ಚಿದಂಬರಂ ಅವರು ತಮ್ಮ ನಿವಾಸಕ್ಕೆ ತೆರಳಿದರು.

ಇತ್ತ ಚಿದಂಬರಂ ಅವರು ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಮಂಗಳವಾರ ಹೈ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಆ ಬಳಿಕ ಅವರು ನಿವಾಸದಿಂದ ಕಾಣೆಯಾಗಿದ್ದರು.

 

ಏನಿದು ಪ್ರಕರಣ?
ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು.