ಆಷಾಡ ಮಾಸ ಮುಗಿದು ಶ್ರಾವಣ ತಿಂಗಳು ಬಂದಿದೆ. ಹಬ್ಬ ಹರಿದಿನಗಳು ಸಾಲು ಸಾಲಾಗಿ ಬರುತ್ತಿದೆ. ಮೊನ್ನೆ ತಾನೇ ನಾಗರ ಪಂಚಮಿ ಹಬ್ಬ ಕಳೆಯಿತು. ವಾರಾಂತ್ಯದಲ್ಲಿ ಅಷ್ಟಮಿ, ತಿಂಗಳ ಕೊನೆಗೆ ಗಣೇಶ ಚೌತಿ, ಬಳಿಕ ನವರಾತ್ರಿ, ದೀಪಾವಳಿ ಹೀಗೆ ಕೊನೆಯಿಲ್ಲದ ಹಬ್ಬಗಳ ಸಾಲು ಸಾಲು. ಎಲ್ಲರಿಗೂ ಸಂಭ್ರಮ ಮತ್ತು ಸಡಗರ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬ ಹರಿದಿನಗಳೆಂದರೆ ಬಣ್ಣ ಬಣ್ಣದ ವೇಷಗಳು ಇರಲೇಬೇಕು. ಮಕ್ಕಳು, ಹದಿಹರೆಯದವರು, ಮುದುಕರು ಹೀಗೆ ಎಲ್ಲರೂ ಬಣ್ಣ ಹಚ್ಚುವವರೆ. ಬಣ್ಣವಿಲ್ಲದೆ ಬದುಕೇ ಇಲ್ಲ.
ನೀರಸ ಯಾಂತ್ರಿಕ ಬದುಕಿಗೆ ಹಬ್ಬಗಳು ಅನಿವಾರ್ಯ. ಜಡ್ಡು ಹಿಡಿದ, ನೊಂದ, ಬೆಂದ ಮತ್ತು ಬಳಲಿದ ದೇಹಕ್ಕೆ ಮತ್ತು ಮನಸ್ಸಿಗೆ ಹಬ್ಬ ಹರಿದಿನಗಳು ಅಮೃತ ಸಿಂಚನವನ್ನೇ ನೀಡುತ್ತದೆ. ವಯಸ್ಸಿನ ಭೇದವಿಲ್ಲ, ಜಾತಿಯ ಅಂತರವಿಲ್ಲ, ಧರ್ಮದ ಪ್ರಶ್ನೆಯೇ ಇಲ್ಲ. ಎಲ್ಲರೂ ಬಣ್ಣ ಹಚ್ಚುವವರೇ. ಊರುಕೇರಿ, ಜನ ಜಂಗುಳಿ ಎಲ್ಲರೂ ಬಣ್ಣದಿಂದ ಮುಳುಗಿ ಏಳುತ್ತಿರುತ್ತವೆ. ಅಷ್ಟಮಿಯ ಸಮಯದಲ್ಲಿ ಅಂಬೆಗಾಲಿಡುವ ಚಿಕ್ಕ ಮಗುವಿನಿದ ಹಿಡಿದು ಎಲ್ಲರೂ ಬಗೆ ಬಗೆಯ ಬಣ್ಣಗಳಿಂದ ಕೃಷ್ಣನ ಅವತಾರದಲ್ಲಿ ಧನ್ಯರಾಗುತ್ತಾರೆ. ಒಂದು ಅಂಕಿಅಂಶಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕನಿಷ್ಠ ಹತ್ತು ಸಾವಿರ ಮಕ್ಕಳು ಕೃಷ್ಣಾಷ್ಟಮಿಯ ಸಮಯದಲ್ಲಿ ಮುದ್ದು ಕೃಷ್ಣರಾಗಿ ಬಣ್ಣ ಹಚ್ಚುತ್ತಾರೆ, ಕಂಗೊಳಿಸುತ್ತಾರೆ.
ಹೆತ್ತವರು ಕಣ್ ಮನ ತುಂಬಿಕೊಂಡು ಧನ್ಯರಾಗುತ್ತಾರೆ, ಪುನೀತರಾಗುತ್ತಾರೆ. ವಾರ್ತಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಫೆಸ್‍ಬುಕ್‍ನಲ್ಲಿ ವಾಟ್ಸ್‍ಆಫ್ ಗಳಲ್ಲಿ ಎಲ್ಲೆಲ್ಲೂ ಮುದ್ದು ಕೃಷ್ಣ ರಾರಾಜಿಸಿರುತ್ತಾನೆ. ಅಷ್ಟಮಿ ಕಳೆದು ಗಣೇಶ ಬರುತ್ತಾನೆ. ಮನೆ ಮಠಗಳಲ್ಲಿ, ಊರು ಕೇರಿಗಳಲ್ಲಿ ದೇಗುಲಗಳಲ್ಲಿ ಸಂಭ್ರಮದ ವಾತಾವರಣ. ಎಲ್ಲೆಲ್ಲೂ ಗಣಪ ರಾರಾಜಿಸಿರುತ್ತಾನೆ. ಬಣ್ಣ ಬಣ್ಣದ ವಿವಿಧ ವೇಷದ, ವಿವಿಧ ಭಂಗಿಯ ಗಣಪ. ಜನಮನಗಳಿಗೆ ಸಡಗರವೇ ಸಡಗರ ಎನಿಲ್ಲವೆಂದರೂ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ ಹತ್ತು ಸಾವಿರ ಗಣಪ ಪ್ರತಿಷ್ಟಾಪನೆಯಾಗುತ್ತಾನೆ. ಬಗೆ ಬಗೆಯ ಬಣ್ಣಗಳಿಂದ ಗಣಪ ವಿಜ್ರಂಭಿಸುತ್ತಾನೆ. ಜನ ಮಾನಸ ಭಕ್ತಿಯ ಪರಕಾಷ್ಟೆಯಲ್ಲಿ ಮಿಂದೇಳುತ್ತಾರೆ. ಊರಿನ ಕೆರೆ, ತೊರೆಗಳೆಲ್ಲಾ ಬಣ್ಣಮಯವಾಗಿರುತ್ತದೆ. ಗಣೇಶ ಚೌತಿ ಮುಗಿದು ನವರಾತ್ರ್ರಿ ಬರುತ್ತದೆ. ನವರಾತ್ರಿ ಎಂದರೆ ನಮ್ಮೂರಿನಲ್ಲಿ ಹುಲಿಗಳದ್ದೇ ಕಾರುಬಾರು. ಮಂಗಳೂರಿನ ಹುಲಿವೇಷ ಜಗತ್ ಪ್ರಸಿದ್ಧ. ಸಣ್ಣ ಮಕ್ಕಳು ಮರಿಹುಲಿಗಳಾಗಿ ರಂಜಿಸುತ್ತಾರೆ. ಇದರ ಜೊತೆಗೆ ಹತ್ತಾರು ಬಗೆಯ ಇತರ ವೇಷದಾರಿಗಳೂ ಇರುತ್ತಾರೆ ಇಲ್ಲಿಯು ಬಣ್ಣಗಳದ್ದೆ ಕಾರುಬಾರು. ಊರೀಡೀ ಬಣ್ಣದ ಲೋಕದಲ್ಲಿ ಮುಳುಗುತ್ತದೆ.
ಇಲ್ಲಿಯೂ ಅಷ್ಟೆ. ಜಾತಿ, ಮತ, ಧರ್ಮಗಳ ಭೇದವಿಲ್ಲದೇ, ಎಲ್ಲರೂ ವೇಷದಾರಿಗಳಾಗಿ ಬಣ್ಣ ಬಣ್ಣದ ವೇಷಗಳಲ್ಲಿ ವಿಜ್ರಂಭಿಸುತ್ತಾರೆ. ಊರಿನ ಸಾಮರಸ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಬಾತೃತ್ವ, ಪ್ರೀತಿ, ಪ್ರೇಮದ ವಿಶ್ವ ಶಾಂತಿಯ ಸಂದೇಶವನ್ನು ಸಾರುತ್ತದೆ. ಹೇಗೆ ಬಣ್ಣವಿಲ್ಲದೇ ಬದುಕಿಲ್ಲ ಬಣ್ಣವೇ ಜೀವನದ ಸಾರ ಎಂಬ ಹಂತಕ್ಕೆ ಬಂದು ನಿಂತಿದ್ದೇನೆ. ಮತ್ತು ಬದುಕಿಗೆ ಹೊಸ ಅರ್ಥವನ್ನು ನೀಡಿದೆ.
ಯಾಕೆ ಜಾಗೃತರಾಗಬೇಕು ?
ಮೊದಲೆಲ್ಲಾ ಬಣ್ಣಗಳ ಬಳಕೆ ಕಡಿಮೆ ಪ್ರಮಾಣದಲ್ಲಿತ್ತು. ಮತ್ತು ನೈಸರ್ಗಿಕವಾದ ಅರಶಿನ, ಕುಂಕುಮ ಇತ್ಯಾದಿಗಳಿಂದ ಬಣ್ಣ ಹಾಕಲಾಗುತ್ತಿತ್ತು. ಆದರೆ ಎಲ್ಲವೂ ಭಿನ್ನವಾಗಿದೆ. ಬಣ್ಣಕ್ಕೆ ಬಹಳ ಬೇಡಿಕೆ ಇದೆ. ಬಣ್ಣದ ವ್ಯಾಪಾರವೇ ಹಲವರಿಗೆ ಬದುಕನ್ನು ನೀಡಿದೆ. ಈಗ ಬಳಸುವ ಬಣ್ಣಗಳು ಕೃತಕವಾಗಿ ತಯಾರಿಸಿದ ಬಣ್ಣಗಳು ಇದರಲ್ಲಿ ಬಹಳಷ್ಟು ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ಇವು ದೇಹಕ್ಕೆ ಹಾನಿಕಾರಕ ಉದಾ: ಕೆಂಪು ಬಣ್ಣಕ್ಕೆ ಬರಲು ಪಾದರಸ ಸಲ್ಫೇಟ್, ಬಿಳಿ ಬಣ್ಣ ಬರಲು ಅಲ್ಯಮಿನಿಯಂ ಬ್ರೋಮೈಡ್, ಕಪ್ಪು ಬಣ್ಣ ಬರಲು ಸೀಸದ ದ್ರಾವಣ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ಚರ್ಮಕ್ಕೆ ಮಾರಕ ಅದೇ ರೀತಿ ಬಣ್ಣದ ಪೇಸ್ಟ್‍ಗಳಲ್ಲಿ ಎಂಜಿನ್ ಆಯಿಲ್ ಮತ್ತು ಹೈಪ್ರೊಕಾರ್ಬನ್ ಆಯಿಲ್‍ಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ನಮ್ಮ ಚರ್ಮದ ಆರೋಗ್ಯಕ್ಕೆ ಮಾರಕ. ಕೃತಕ ಬಣ್ಣಗಳಲ್ಲಿ ಆಯಿಲ್ ಮಿಶ್ರಿತ ಮತ್ತು ನೀರು ಮಿಶ್ರಿತ ಎಂದು ಎರಡು ವಿಧಗಳಿವೆ. ನೀರು ಮಿಶ್ರಿತ ಬಣ್ಣಗಳು ಹೆಚ್ಚು ಮಾರಕವಲ್ಲ. ಆಯಿಲ್ ಮಿಶ್ರಿತ ಬಣ್ಣಗಳಲ್ಲಿ ಹೈಡ್ರೋಕಾರ್ಬನ್ ದ್ರಾವಣದ ರೂಪದಲ್ಲಿದ್ದು ಹೆಚ್ಚಿನ ಅನಾರೋಗ್ಯಕ್ಕೆ ಕಾರಣವಾಗಬಹುದು.
ಏನೇನು ತೊಂದರೆ ಆಗಬಹುದು ?
1. ಅಲ್ಪ ಕಾಲದ ತೊಂದರೆಗಳು: ಚರ್ಮದಲ್ಲಿ ತುರಿಕೆ, ಕೆರೆತ ಮತ್ತು ಗುಳ್ಳೆಗಳು, ಕಣ್ಣಿನಲ್ಲಿ ಉರಿತ, ಗಂಟಲು ಕೆರೆತ, ಕೆಮ್ಮ, ದಮ್ಮು, ಮೂಗಿನಲ್ಲಿ ಅಲರ್ಜಿ, ತಲೆನೋವು, ವಾಂತಿ, ತಲೆಸುತ್ತುವಿಕೆ, ಆಯಾಸಗೊಳ್ಳುವಿಕೆ, ಮರೆಗುಳಿತನ, ಕಣ್ಣು ಮಂಜಾಗುವುದು ಇತ್ಯಾದಿ.
2. ದೀರ್ಘಕಾಲದ ತೊಂದರೆಗಳು: ಯಕೃತ ವೈಪಲ್ಯ, ಮೂತ್ರ ಪಿಂಡದ ವೈಕಲ್ಯ, ಅಸ್ತಮ ಕ್ಯಾನ್ಸರ್ (ಅರ್ಬುದ ರೋಗ), ನರಮಂಡದ ದೌರ್ಬಲ್ಯ, ಕಿವಿ ಕೇಳದಿರುವುದು, ಕಣ್ಣು ಕಾಣದಿರುವುದು, ಕೈ ನಡುಗುವಿಕೆ, ತೊದಲುವಿಕೆ, ನರಗಳ ಮೇಲಿನ ಪದರವಾದ ಮೈಯಲಿನ್ ಕರಗಿ ಹೋಗಿ ನರಮಂಡಲದ ರೋಗಗಳು ಇತ್ಯಾದಿಗಳು.
ಏನು ಮುಂಜಾಗರುಕತೆ ವಹಿಸಬೇಕು ? ತಡೆಗಟ್ಟುವುದು ಹೇಗೆ ?
1. ಅತೀ ಅನಿವಾರ್ಯವಿದ್ದಲ್ಲಿ ಮಾತ್ರ ಬಣ್ಣ ಹಚ್ಚಬೇಕು. ಬಣ್ಣ ಹಚ್ಚದೇ, ಬೇರೆ ಬೇರೆ ರೀತಿಯ ವಸ್ತ್ರ ವಿನ್ಯಾಸ ಬಳಸಿ ವೇಷ ಹಾಕಿದರೆ ಉತ್ತಮ. ಮಕ್ಕಳಿಗೆ ಬಣ್ಣ ಹಚ್ಚಲೇ ಬಾರದು. ಮಕ್ಕಳ ಚರ್ಮ ಬಹಳ ನಾಜೂಕಾಗಿರುತ್ತದೆ.
2. ಬಣ್ಣ ಬಳಸಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಅತೀ ಕಡಿಮೆ ಬಳಸಿ. ನೈಸರ್ಗಿಕ ಬಣ್ಣವನ್ನೇ ಬಳಸಿ, ಕೃತಕ ಬಣ್ಣಗಳನ್ನು ಬಳಸಲೇ ಬೇಡಿ.
3. ಅಸ್ತಮಾ, ತುರಿಕೆ, ಅಲರ್ಜಿ ಮತ್ತು ಚರ್ಮ ರೋಗವಿರುವ ಮಕ್ಕಳು, ವಯಸ್ಕರು ಬಣ್ಣ ಹಚ್ಚ ಬಾರದು. ಬಣ್ಣ ಹಚ್ಚುವ ಮೊದಲು ಚರ್ಮ ವೈದ್ಯರ ಸಲಹೆ ಪಡೆಯಿರಿ. ಚರ್ಮ ನಮ್ಮ ದೇಹದ ರಕ್ಷಣಾ ಕವಚ ಇದ್ದಂತೆ. ಅದಕ್ಕೆ ಗೌರವ ನೀಡಬೇಕು.
4. ಬಣ್ಣ ಹಚ್ಚಿರುವ ಸಮಯದಲ್ಲಿ ಸಾಕಷ್ಟು ನೀರು ಕುಡಿಯಿರಿ. ದೇಹದ ನೀರಿನ ಸಾಂಧ್ರತೆ ಕಡಿಮೆಯಾಗದಂತೆ ಎಚ್ಚರ ವಹಿಸಿ. ನೀರಿನ ಅಂಶ ಕಡಿಮೆಯಾದಲ್ಲಿ, ಚರ್ಮ ಒಣಗಿಕೊಂಡಲ್ಲಿ ಚರ್ಮಗಳ ನಡುವಿನ ಚಿಕ್ಕ ಚಿಕ್ಕ ರಂಧ್ರಗಳ ಮುಖಾಂತರ ರಾಸಾಯನಿಕಗಳು ದೇಹದ ಒಳಗೆ ಸೇರುವ ಅಪಾಯವಿದೆ.
5. ಬಣ್ಣ ಹಚ್ಚುವ ಮೊದಲು ವ್ಯಾಸಲೀನ್ ದೇಹಕ್ಕೆ ಹಚ್ಚಬೇಕು. ಚರ್ಮವನ್ನು ತೇವವಾಗಿರಿಸುವ ದ್ರವ್ಯಗಳನ್ನು ಬಳಸಬೇಕು. ಚರ್ಮದ ತೇವಾಂಶ ಕಡಿಮೆ ಯಾಗದಂತೆ ನೋಡಿಕೊಳ್ಳಿ.
6. ಕೂದಲಿಗೆ ಬಣ್ಣ ಹಚ್ಚುವ ಮೊದಲು ತೆಂಗಿನೆಣ್ಣೆ ಬಳಸಿ. ಕೂದಲಿನ ಬಣ್ಣ ತೆಗೆಯುವ ಸಮಯದಲ್ಲಿ ಹಿತ ಮಿತವಾಗಿ ಶ್ಯಾಂಪು ಬಳಸಿ.
7. ದೇಹಕ್ಕೆ ಹಚ್ಚಿದ ಬಣ್ಣ ತೆಗೆಯುವ ಧಾವಂತದಲ್ಲಿ ವಿಪರೀತ ಸೋಪ್ (ನೊರೆಕಾರಕ) ದ್ರಾವಣವನ್ನು ಬಳಸಬೇಡಿ ಪದೇ ಪದೇ ನೀರು ಬಳಸಿ, ಜೋರಾಗಿ ಉಜ್ಜುವುದರಿಂದ ಚರ್ಮಕ್ಕೆ ಗಾಯವಾಗಿ ಸೋಂಕು ತಗಲುವ ಸಾಧ್ಯತೆ ಇದೆ. ಬಣ್ಣ ತೆಗೆಯಲು ಸೀಮೆ ಎಣ್ಣೆ, ಸ್ಪೀರಿಟ್, ಆಲ್ಕೋಹಾಲ್, ಪೆಟ್ರೋಲ್‍ಗಳನ್ನು ಬಳಸಲೇ ಬಾರದು.
8. ಬಿಸಿ ನೀರಿನಲ್ಲಿ ಬಣ್ಣ ತೆಗೆಯಲೇ ಬಾರದು. ಬಿಸಿ ನೀರು ಬಳಸಿದಲ್ಲಿ ರಾಸಾಯನಿಕ ದ್ರಾವಣ ಕರಗಿ ಚರ್ಮಕ್ಕೆ ಹಾನಿಯಾಗಬಹುದು. ತಣ್ಣೀರನ್ನು ಬಳಸಿ, ನೈಸರ್ಗಿಕ ನೊರೆಕಾರಕ ದ್ರಾವಣ ಅಥವಾ ಬೇಬಿ ಆಯಿಲ್ ಬಳಸಿ ದೇಹಕ್ಕೆ ಅಂಟಿದ ಬಣ್ಣವನ್ನು ತೆಗೆಯಬೇಕು.
9. ಬಣ್ಣ ತೆಗೆದು ಒಂದು ವಾರದವರೆಗೆ ಪ್ರಖರವಾದ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಬೇಡಿ. ಈ ಅವಧಿಯಲ್ಲಿ ಮುಖ ಸೌಂದರ್ಯ ವರ್ಧಕ ಚಿಕಿತ್ಸೆ ಮತ್ತು ಬ್ಲಿಚಿಂಗ್‍ಗಳನ್ನು ಮಾಡಿಸಲೇ ಬಾರದು. ಚರ್ಮ ತುರಿಕೆ, ಕೆರೆತ, ಅಲರ್ಜಿ, ಗುಳ್ಳೆಗಳು ಕಂಡಲ್ಲಿ ತಕ್ಷಣ ಚರ್ಮ ತಜ್ಞರನ್ನು ಸಂಪರ್ಕಿಸಿ.
ಕೊನೆ ಮಾತು
ಅಮ್ಮ್ಮಂದಿರೇ ನಿಮ್ಮ ಮುದ್ದು ಮಕ್ಕಳು ಹೇಗಿದ್ದರೂ ಚೆನ್ನ. ಕೃಷ್ಣಾಷ್ಟಮಿ ಸಮಯದಲ್ಲಿ ಮಕ್ಕಳಿಗೆ ವೇಷ ಧರಿಸಿ ಶೃಂಗಾರ ಮಾಡಿ. ಆದರೆ ಬಣ್ಣ ಬಳಸಬೇಡಿ. ನೈಸರ್ಗಿಕ ಬಣ್ಣವನ್ನು ಹಿತಮಿತವಾಗಿ ಬಳಸಿ. ಅದೇ ರೀತಿ ನವರಾತ್ರಿಯ ಸಮಯದಲ್ಲೂ ನಿಮ್ಮ ಅಣ್ಣ ತಮ್ಮಂದಿರಿಗೂ ಹೆಚ್ಚು ಜಾಗರೂಕರಾಗಲು ತಿಳಿಹೇಳಿ. ಅಗತ್ಯವಿದ್ದಷ್ಟೆ ಬಣ್ಣ ಬಳಸಿ ಅತಿಯಾದ ಆಲಂಕಾರ ಬೇಡ. ವೇಷ ಹಾಕುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಬಣ್ಣ ವಿಲ್ಲದೆ ಬದುಕೇ ಇಲ್ಲ. ಬದುಕು ವರ್ಣಮಯವಾಗಿದ್ದರೆ ಮಾತ್ರ ಹೊಸತನವಿರುತ್ತದೆ. ಜೀವಕಳೆ ಬರುತ್ತದೆ. ಆದರೆ ಅತಿಯಾದ “ಬಣ್ಣ” ನಮ್ಮ ಜೀವನದ ಉತ್ಸಹದ ಬುಗ್ಗೆಯನ್ನೇ ಬತ್ತಿಸದಂತೆ ಎಚ್ಚರ ವಹಿಸಿ.
ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ