ಪುತ್ತೂರು: ಭಾರತ ದೇಶವು ಜಗತ್ತಿನಲ್ಲಿಯೇ ವೈವಿಧ್ಯತೆಯಲ್ಲಿ ಏಕತೆಗೆ ಹೆಸರುವಾಸಿ. ವಿಭಿನ್ನ ಜಾತಿ, ಧರ್ಮ, ಪಂಥ, ಪ್ರದೇಶ, ಭಾಷೆ, ಸಂಸ್ಕೃತಿಯ ಜನರು ಯಾವುದೇ ರೀತಿಯ ದ್ವೇಷದ ಭಾವನೆಗಳಿಲ್ಲದೆ ಪರಸ್ಪರ ಸಾಮರಸ್ಯದ ಭಾವನೆಯಿಂದಿರುವುದು ಇಲ್ಲಿಯ ವಿಶೇಷತೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಲಿಯೋ ನೊರೊನ್ಹಾ ಹೇಳಿದರು.
ಸಂತ ಪಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಆಗಸ್ಟ್ 20 ರಂದು ಆಯೋಜಿಸಲಾದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಸಂವಿಧಾನವಿದೆ. ಇದರಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನಿಷ್ಟದಂತೆ ಜೀವಿಸುವ ಸ್ವಾತಂತ್ರ್ಯವನ್ನು ಕಲ್ಪಿಸಲಾಗಿದೆ. ತನ್ನ ಹಕ್ಕನ್ನು ಪ್ರತಿಪಾದಿಸುವುದರೊಂದಿಗೆ ಇತರರನ್ನು ಸೋದರತಾ ಭಾವನೆಯಿಂದ ಕಾಣುವ ಜವಾಬ್ದಾರಿಯನ್ನು ಪಾಲಿಸುವುದು ಬಹಳ ಅಗತ್ಯ ಎಂದು ಹೇಳಿ, ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೆಲ್ಲರೂ ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇಧ ಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೆಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ. ಅಲ್ಲದೇ, ವೈಯಕ್ತಿಕವಾಗಲೀ ಅಥವಾ ಸಾಮೂಹಿಕವಾಗಿಯಾಗಲೀ, ನಮ್ಮಲ್ಲಿರುವ ಎಲ್ಲಾ ಬೇಧಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆ ಎಂದು ಪ್ರತಿಜ್ಞೆ ಕೈಗೊಂಡರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಭಾರತಿ ಎಸ್ ರೈ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ| ಕೆ. ಚಂದ್ರಶೇಖರ್ ಸ್ವಾಗತಿಸಿದರು. ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ದಿನಕರ ಅಂಚನ್ ವಂದಿಸಿದರು.