ಲಲಿತಕಲಾ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ; ಕಲಾನುಭವ ಉತ್ತಮ ಜೀವನವನ್ನು ರೂಪಿಸಲು ಸಹಕಾರಿ : ವಿದ್ವಾನ್ ದೀಪಕ್ ಕುಮಾರ್ – ಕಹಳೆ ನ್ಯೂಸ್
ಪುತ್ತೂರು: ಶಿಕ್ಷಣದಲ್ಲಿ ಕಲಾ ಚಟುವಟಿಕೆಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿದೆ. ಏಕೆಂದರೆ ಪಠ್ಯದ ಜೊತೆಗೆ ನೃತ್ಯ, ಸಂಗೀತ, ಮುಂತಾದ ಅಭ್ಯಾಸದಿಂದ ಶಾರೀರಿಕ ಹಾಗೂ ಮಾನಸಿಕ ವ್ಯಾಯಾಮವನ್ನು ನೀಡುತ್ತದೆ. ಅದರೊಂದಿಗೆ ಮನಸ್ಸಿಗೆ ಏಕಾಗ್ರತೆ, ಸಂತೋಷ, ನೆಮ್ಮದಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಭಾರತೀಯ ಕಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳ ಕಲಾನುಭವ ಉತ್ತಮ ಜೀವನ ರೂಪಿಸಲು ಸಹಾಯಕವಾಗಿದೆ ಎಂದು ಪುತ್ತೂರಿನ ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಐಕ್ಯುಎಸಿ ಹಾಗೂ ಲಲಿತಕಲಾ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಲಲಿತಕಲಾ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಕಲೆ ಎಂಬುದು ಶಿಸ್ತು ಮತ್ತು ವ್ಯಕ್ತಿತ್ವವನ್ನು ಪರಿಷ್ಕರಣೆ ಮಾಡುತ್ತದೆ. ಜೀವನದ ಕೊನೆಯವರೆಗೂ ಕಲೆಯಲ್ಲಿ ಅಭ್ಯಸಿಸುವುದು ತುಂಬಾ ಇದೆ. ನೃತ್ಯವು ದೇವರೊಂದಿಗೆ ನಮ್ಮ ನೇರ ಸಂಬಂಧವನ್ನು ಕಲ್ಪಿಸುತ್ತದೆ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಲಲಿತಕಲೆ ಎಂಬುವುದು ಪ್ರತಿಯೊಬ್ಬರ ಮನಸ್ಸಿನಲ್ಲಿ ಸಾತ್ವಿಕ ರೂಪದ ಪರಿಣಾಮವನ್ನು ಬೀರುತ್ತದೆ. ಹಾಗೆಯೇ, ಆ ಕಲೆಯನ್ನು ಸ್ವೀಕಾರ ಮಾಡುವಾಗ ಪ್ರೇಕ್ಷಕನಾದವನು ನೋಡುವ ಹಾಗೂ ಕೇಳುವ ಆಸ್ವಾದದಲ್ಲಿ ನೈಜ ಮನೋಸ್ಥಿತಿಯನ್ನು ಮರೆತು ಬಿಡಬಾರದು. ಈ ಲಲಿತಕಲೆ ಸಾತ್ವಿಕ ಬೆಳಕನ್ನು ನೀಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ. ಟಿ. ಜಯರಾಮ್ ಭಟ್ ಮಾತನಾಡಿ, ಲಲಿತ ಕಲೆಯಲ್ಲಿ ನಾವು ಶಾಸ್ತ್ರೀಯತೆಯನ್ನು ಕಾಣಬಹುದು. ಎಲ್ಲಾ ನೃತ್ಯ ಪ್ರಕಾರಗಳು, ಸಂಗೀತ ಇತ್ಯಾದಿ ಮನುಷ್ಯರಲ್ಲಿ ಮನಸ್ಸಿನ ನೋವನ್ನು, ಆಯಾಸವನ್ನು ದೂರ ಮಾಡುತ್ತದೆ. ಅಲ್ಲದೇ ನಮ್ಮ ಸುತ್ತಮುತ್ತಲ ಪರಿಸರದ ಅನೇಕ ಜೀವ-ಜಂತು, ಗಿಡ-ಮರಗಳಲ್ಲೂ ಸಂಗೀತದ ಆಲಾಪನೆಯೊಂದಿಗೆ ತಲ್ಲೀನಗೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯುಎಸಿ ಸಂಯೋಜಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಹೆಚ್. ಜಿ. ಉಪಸ್ಥಿತರಿದ್ದರು. ಲಲಿತಕಲಾ ಸಂಘದ ಸಂಯೋಜಕಿ ಡಾ. ದುರ್ಗಾರತ್ನ ಸ್ವಾಗತಿಸಿ, ವಿವೇಕಾನಂದ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ವಂದಿಸಿದರು. ಲಲಿತಕಲಾ ಸಂಘದ ವಿದ್ಯಾರ್ಥಿಗಳಾದ ಪೂಜಾ ಹಾಗೂ ಸ್ವಾತಿ ಸಮನ್ವಿತ ಕಾರ್ಯಕ್ರಮ ನಿರೂಪಿಸಿದರು.