ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ; ಲೇಖನಗಳ ಸತ್ಯಾಂಶವನ್ನು ವಿಮರ್ಶಿಸಿ: ನಾ. ಕಾರಂತ ಪೆರಾಜೆ – ಕಹಳೆ ನ್ಯೂಸ್
ಪುತ್ತೂರು: ಉತ್ತಮ ಓದುಗಾರ ಒಳ್ಳೆಯ ಬರಹಗಾರನಾಗಬಹುದು ಎಂಬ ಮಾತಿನಂತೆ ಪತ್ರಕರ್ತ ಸಮಾಜದಲ್ಲಿ ಆಗುವ ವಿಚಾರಗಳನ್ನು ಲೇಖನದ ರೂಪದಲ್ಲಿ ಜನರಿಗೆ ತಲುಪಿಸಬೇಕು. ಆದರೆ ಆ ಲೇಖನದಲ್ಲಿ ತಪ್ಪು ಮಾಹಿತಿ ಇರದಂತೆ ಎಚ್ಚರವಹಿಸಬೇಕು. ಆದ್ದರಿಂದ ಸತ್ಯಾಂಶಗಳನ್ನು ವಿಮರ್ಶಿಸಿ ಲೇಖನ ಬರೆಯಬೇಕು ಎಂದು ಪುತ್ತೂರಿನ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ ಹೇಳಿದರು.
ಅವರು ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ‘ಬರವಣಿಗೆ ಏನು ಮತ್ತು ಹೇಗೆ’ ಎಂಬ ವಿಷಯದ ಕುರಿತು ಬುಧವಾರ ಮಾತನಾಡಿದರು.
ಪ್ರತಿಯೊಂದು ಲೇಖನವು ಯಾಕಾಗಿ, ಯಾರಿಗಾಗಿ, ಏನನ್ನು ಮತ್ತು ಯಾವಾಗ ಎಂಬ ನಾಲ್ಕು ಅಡಿಗಟ್ಟಿನ ಮೇಲೆ ನಿಂತಿದೆ. ಹಾಗಾಗಿ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡಿಕಿ ಅದನ್ನು ಬರವಣಿಗೆ ಮೂಲಕ ರೂಪ ನೀಡುವುದೇ ಲೇಖನ ಎಂದು ತಿಳಿಸಿದರು.
ಸಮಯಪಾಲನೆಯೊಂದಿಗೆ ಸದಾ ವಿಷಯಗಳನ್ನು ಹುಡುಕುವ ಕಾರ್ಯದಲ್ಲಿ ನಿರತರಾಗಿರುವವರು ಪತ್ರಕರ್ತರು. ಹಾಗಾಗಿ ಆಯಾಯ ಋತುವಿಗೆ ಆಧಾರಿತ ಲೇಖನವನ್ನು ಬರೆಯಲು ಸಾಧ್ಯವಾಗುತ್ತದೆ. ಇದರಿಂದ ಆತನ ಬರವಣಿಗೆ ವೃದ್ಧಿಸುತ್ತದೆ ಎಂದು ಸಲಹೆ ನೀಡಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್‍ಕುಮಾರ್ ಕಮ್ಮಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ವಂದಿಸಿದರು.