ಪುತ್ತೂರು: ದೇಶ ಕಟ್ಟುವುದರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ. ಅವರು ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ಮುನ್ನಡೆಯುತ್ತಿದ್ದಾರೆ. ಎಲ್ಲರೂ ಒಂದೇ ಎಂಬ ಭಾವನೆ ಮೂಡಿದಾಗ ದೇಶ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸಿ. ಕೆ. ಮಂಜುನಾಥ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಆಯೋಜಿಸಿಲಾದ “ಸದ್ಭಾವನಾ ದಿನ”ವನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸದ್ಭಾವನಾ ಯೋಚನೆ, ಅನಿಸಿಕೆ ಮನಸ್ಸಿನಲ್ಲಿ ಬಂದರೆ ಸದೃಢವಾದ ರಾಷ್ಟ್ರವನ್ನು ಕಟ್ಟಬಹುದು. ಸದ್ಭಾವನಾ ದಿನವೆಂಬುವುದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಬದುಕಿನಲ್ಲಿ ಅನುಸರಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ಲಭಿಸಿದ ಜೀವನಮೌಲ್ಯಗಳು ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗುತ್ತದೆ. ಮನುಷ್ಯ ಭೂಮಿಗೆ ಬರುವಾಗಲೂ, ಇಲ್ಲಿಂದ ಹೋಗುವಾಗಲೂ ಏನನ್ನು ತಂದಿಲ್ಲ ಮತ್ತು ತೆಗೆದುಕೊಂಡು ಹೋಗುವುದಿಲ್ಲ. ಹಾಗಿರುವಾಗ ಮನುಷ್ಯನೇ ಸೃಷ್ಟಿಸಿದ ಜಾತಿ, ಧರ್ಮಗಳ ಹೆಸರಿನಲ್ಲಿ ಕಿತ್ತಾಡುವುದು ಸದ್ಭಾವನಾ ಲಕ್ಷಣವಲ್ಲ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಮನುಷ್ಯನಲ್ಲಿ ಸದ್ಭಾವನೆ ಇಲ್ಲದಾಗ, ಆತನ ವ್ಯಕ್ತಿತ್ವದಲ್ಲಿ ದೌರ್ಬಲ್ಯ ಉಂಟಾಗುತ್ತದೆ. ತಾನು ಮಾಡಬೇಕಾದ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ, ಅಲ್ಲಿ ಯಾವುದೇ ಇಂತಹ ದಿನಗಳ ಆಚರಣೆಯ ಅಗತ್ಯವಿಲ್ಲ. ಕ್ರೀಯಾಶೀಲತೆ ಎಂಬುವುದು ಇದ್ದಾಗ ಮಾತ್ರವೇ ಸಂಸ್ಕಾರಯುತವಾದ ಜೀವನ ಸಾಗಲು ಸಾಧ್ಯ. ವಿವಿಧತೆಯಲ್ಲಿ ಏಕತೆ ಇರುವ ದೇಶ ನಮ್ಮದು ಆದರೆ ಇಂದು ಏಕತೆಯಲ್ಲಿ ಅಭಿವ್ಯಕ್ತ ಭಾವನೆ ಉಂಟಾಗುತ್ತದೆ. ಏಕತೆ ಎಂಬುವುದು ದಿನನಿತ್ಯದ ಜೀವನದಲ್ಲಿ ಮೂಡಿ ಬರಬೇಕು, ಆಗ ಸದೃಢವಾದ ಸಮಾಜವನ್ನು ರೂಪಿಸಬಹುದು ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಘಟಕದ ವಿದ್ಯಾರ್ಥಿಗಳು ಆಶ್ರಯ ಗೀತೆಯನ್ನು ಹಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಶ್ರೀನಾಥ್ ಬಿ. ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ವಿದ್ಯಾ ಕೆ.ಎನ್. ಪ್ರತಿಜ್ಞೆ ಬೋಧಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕ ನಾಯಕ ದೀಕ್ಷಿತ್ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತ ಹೆಚ್. ರೈ ಕಾರ್ಯಕ್ರಮವನ್ನು ನಿರೂಪಿಸಿದರು.