ರಾಯಚೂರು : ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ವಿರುದ್ಧ ಶಾಂತಿ ಕದಡಿದ ಆರೋಪದಡಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
ರಾಯರ 348ನೇ ಆರಾಧನೆಯ ಮಹಾ ರಥೋತ್ಸವದ ವೇಳೆ ಮಠದ ಆವರಣದಲ್ಲಿ 100 ರೂ. ನೋಟುಗಳನ್ನು ತೂರಿ ಶ್ರೀಗಳು ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಮಠದ ವಸತಿ ಸಮುಚ್ಚಯವೊಂದರ ನಿರ್ವಹಣೆ ಗುತ್ತಿಗೆ ಪಡೆದಿರುವ ನಾರಾಯಣ ಶ್ರೀ ಸುಭುದೇಂದ್ರ ತೀರ್ಥರ ವಿರುದ್ಧ ದೂರು ನೀಡಿದ್ದಾರೆ. ರಾಯರ ಆರಾಧನೆಯ ಉತ್ತರರಾಧನೆ ದಿನ ಆಗಸ್ಟ್ 18ರಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಈ ವೇಳೆ ಮಠದಲ್ಲಿ ಇಲ್ಲದ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿ ಶ್ರೀಗಳು ಭಕ್ತರ ಕಡೆಗೆ ನೂರು ರೂ. ಮುಖ ಬೆಲೆಯ ನೋಟುಗಳನ್ನು ತೂರಿದ್ದರು. ಇದರಿಂದ ನೂಕುನುಗ್ಗಲು ಉಂಟಾಗಿ ಜನ ತೊಂದರೆ ಅನುಭವಿಸಿದ್ದರು. ಈ ಸಂದರ್ಭದಲ್ಲಿ ಮಂತ್ರಾಲಯ ಶಾಸಕ ಬಾಲನಾಗಿರೆಡ್ಡಿ ಕುಟುಂಬ ಸಹ ನೂಕುನುಗ್ಗಲಿಗೆ ಒಳಗಾಯಿತು ಎಂದು ದೂರಿನಲ್ಲಿ ಉಲ್ಲೆಖಿಸಲಾಗಿದೆ.
ಹೀಗಾಗಿ ನೂಕು ನುಗ್ಗಲಿಗೆ ಕಾರಣವಾದ ಸುಭುದೇಂದ್ರ ತೀರ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಅದರ ಜೊತೆಗೆ ನನ್ನ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ಶ್ರೀಗಳೇ ಕಾರಣ ಎಂದು ದೂರಿನಲ್ಲಿ ನಾರಾಯಣ ತಿಳಿಸಿದ್ದಾರೆ.