ಪಾಕಿಸ್ತಾನದ ಲಾಹೋರಿನಲ್ಲಿ ಮುಸಲ್ಮಾನನಂತೆ ವೇಷ ಬದಲಿಸಿಕೊಂಡು ಬರೋಬ್ಬರಿ 7 ವರ್ಷ ಗೂಢಚಾರಿಯಂತೆ ಕೆಲಸ ಮಾಡಿದ್ದ ಭಾರತದ ಸಿಂಹ – ಅಜಿತ್ ದೋವಲ್
ದೆಹಲಿ : ಎಂಭತ್ತರ ದಶಕದಲ್ಲಿ ‘ಖಾಲಿಸ್ತಾನ್’ ಸ್ಥಾಪನೆಗಾಗಿ ಪಂಜಾಬಿನಾದ್ಯಂತ ಭಾರೀ ಪ್ರಮಾಣದ ಹಿಂಸಾಚಾರ ನಡೆದಿತ್ತು. ಇದರ ಭಾಗವಾಗಿ ಅಮೃತ್ಸರದ ‘ಗೋಲ್ಡನ್ ಟೆಂಪಲ್’ಗೆ ಉಗ್ರರು 9 ಮೇ 1988ರಂದು ದಾಳಿ
ಮಾಡಿ ನೂರಾರು ಸಾರ್ವಜನಿಕರನ್ನ ಒತ್ತೆಯಾಳುಗಳಾಗಿ ಬಂಧಿಸುತ್ತಾರೆ. ಆ ಒತ್ತೆಯಾಳುಗಳಲ್ಲಿ ರೊಮಾನಿಯಾ ದೇಶದ ರಾಯಭಾರಿಯೂ ಇರುತ್ತಾನೆ. ವಿಷಯ ತಿಳಿದ ಕೂಡಲೆ ರಾಷ್ಟ್ರೀಯ ರಕ್ಷಣಾ ಪಡೆಗಳು, NSG (National Security Guard) ಕಮಾಂಡೊಗಳು ಸ್ಥಳಕ್ಕೆ ಧಾವಿಸುತ್ತಾರೆ. 1984ರಲ್ಲಿ ಇಂತಹುದೆ ಸನ್ನಿವೇಶ ಸಂಭವಿಸಿದಾಗ ರಕ್ಷಣಾ ಪಡೆಗಳ ಅಸಮರ್ಪಕ ಕಾರ್ಯಾಚರಣೆಯಿಂದಾಗಿ ನರಮೇಧವೇ ಆಗಿರುತ್ತದೆ. ಆದ್ದರಿಂದ ಈ ಸಲ ಸಾರ್ವಜನಿಕರ ಪ್ರಾಣ ಹಾನಿ ಆಗದಂತೆ ಕಾರ್ಯಾಚರಣೆ ಮಾಡುವಂತೆ ಕೇಂದ್ರ ಸರ್ಕಾರದ ಆದೇಶ ಬಂದಿರುತ್ತದೆ.
ಈ ಆದೇಶ ಅಲ್ಲಿನ ಉನ್ನತ ರಕ್ಷಣಾಧಿಕಾರಿಗಳಿಗೆ ಇದ್ದ ಒತ್ತಡ ಇನ್ನಷ್ಟು ಹೆಚ್ಚಿಸುತ್ತದೆ. ಕಾರಣ ; ದೇವಸ್ಥಾನದಲ್ಲಿರುವ ಉಗ್ರರ ಸಂಖ್ಯೆ ಗೊತ್ತಿಲ್ಲ, ಉಗ್ರರು ಯಾವ ಯಾವ ಜಾಗದಲ್ಲಿದ್ದಾರೋ ಗೊತ್ತಿಲ್ಲ, ಉಗ್ರರ ಬಳಿ ಇರುವ ಆಯುಧಗಳ ಪ್ರಮಾಣ ಮತ್ತು ಅವುಗಳ ತೀವ್ರತೆಯ ಬಗ್ಗೆ ಮಾಹಿತಿ ಇಲ್ಲ. ಇವೆಲ್ಲದರ ಜೊತೆ ಗೃಹ ಇಲಾಖೆಯ ಆದೇಶ!
ಒಬ್ಬ ರಿಕ್ಷಾ ತುಳಿಯುವ ವ್ಯಕ್ತಿ ದೇವಸ್ಥಾನದ ಸುತ್ತಮುತ್ತಲು ಬೇಕಂತಲೆ ಓಡಾಡುತ್ತ, ಉಗ್ರರಿಗೆ ಸನ್ಹೆಗಳನ್ನು ಮಾಡುತ್ತಾ ಅವರ ಗಮನ ಸೆಳೆಯಲು ಯತ್ನಿಸುತ್ತಿರುತ್ತಾನೆ. ಈ ವ್ಯಕ್ತಿ ಆ ಊರಿಗೆ ಹೊಸಬ. ಈತನ ಮೇಲೆ ಅನುಮಾನ ಬಂದು ಅವನನ್ನೆ ಹಿಂಬಾಲಿಸಿದ ಉಗ್ರರನ್ನು ಈ ವ್ಯಕ್ತಿಯೇ ಮಾತನಾಡಿಸುತ್ತಾನೆ. ತಾನು ಪಾಕಿಸ್ತಾನದ ISI ಏಜೆಂಟ್, ನಿಮಗೆ ನೆರವು ನೀಡಲೆಂದು ನನ್ನನ್ನು ಕಳುಹಿಸಿದ್ದಾರೆ ಎಂದು ಪರಿಚಯಿಸಿಕೊಳ್ಳುತ್ತಾನೆ. ಉಗ್ರರು ಸಂತಸದಿಂದ ಈತನನ್ನು ದೇವಸ್ಥಾನದ ಒಳಗೆ ಕರೆದುಕೊಂಡು ಹೋಗಿ ಅವರ ಆಗಿನ ಪರಿಸ್ಥಿತಿ, ಮುಂದಿನ ಯೋಜನೆಗಳನ್ನು ತಿಳಿಸುತ್ತಾರೆ. ಮಾತುಕತೆಯ ನಂತರ ಆ ಉಗ್ರರಿಗೆ ಸ್ವಲ್ಪ ಹಣ ಕೊಟ್ಟು ಹೊರಬರುತ್ತಾರೆ.
ದೇವಸ್ಥಾನದಿಂದ ಹೊರಬಂದ ರಿಕ್ಷಾಚಾಲಕ ನೇರವಾಗಿ NIA ಕಮಾಂಡೊಗಳಿದ್ದಲ್ಲಿಗೆ ಬಂದು ತಕ್ಷಣ ಎಲ್ಲರೂ ಒಂದು ಕಡೆ ಸೇರುವಂತೆ ತಿಳಿಸುತ್ತಾರೆ. ಒಂದು ನಕ್ಷೆಯನ್ನು ಮುಂದಿಟ್ಟುಕೊಂಡು ಯಾವ ಯಾವ ಜಾಗದಲ್ಲಿ ಎಷ್ಟೆಷ್ಟು ಉಗ್ರರಿದ್ದಾರೆ, ಅವರ ಬಳಿ ಇರುವ ಶಸ್ತ್ರಾಸ್ತ್ರಗಳು, ಅವುಗಳ ತೀವ್ರತೆ, ಅವರ ಯೋಜನೆಗಳ ಜೊತೆ ಕಮಾಂಡೊಗಳು ಅನುಸರಿಸಬೇಕಾದ ಕಾರ್ಯತಂತ್ರವನ್ನೂ ವಿವರಿಸುತ್ತಾರೆ. ಎಲ್ಲವನ್ನು ಕೇಳಿಸಿಕೊಂಡ ಕಮಾಂಡೊಗಳಿಗೆ ಈತ ಯಾರು ಎಂಬ ಪ್ರಶ್ನೆಯಾದರೆ, ಇವರ ಪರಿಚಯ ಇರುವವರಿಗೆ ಇಷ್ಟೆಲ್ಲಾ ಮಾಹಿತಿ ಇವರಿಗೆ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ.
ಹತ್ತು ದಿನಗಳ ನಂತರ 18 ಮೇ 1988ರಂದು ಕೊನೆಗೂ ‘ಆಪರೇಷನ್ ಬ್ಲ್ಯಾಕ್ ಥಂಡರ್’ ಯಶಸ್ವಿಯಾಗಿ ಅಂತ್ಯಗೊಳಿಸಲಾಗುತ್ತೆ. ಎರಡು ನೂರು ಉಗ್ರರು ಶರಣಾಗುತ್ತಾರೆ, 41 ಉಗ್ರರ ಪ್ರಾಣ ಪಕ್ಷಿ ಗಾಳಿಯಲ್ಲಿ ಹಾರಿಹೋಗಿರುತ್ತದೆ. ಈ ಯಶಸ್ವಿ ಕಾರ್ಯಾಚರಣೆಯ ರುವಾರಿ ರಿಕ್ಷಾ ಚಾಲಕ ಭಾರತದ ಜೇಮ್ಸ್ ಬಾಂಡ್ ‘ಶ್ರೀ ಅಜಿತ್ ದೊವಲ್’ ಅವರಿಗೆ ಭಾರತ ಸರ್ಕಾರ ಪ್ರತಿಷ್ಟಿತ ‘ಕೀರ್ತಿ ಚಕ್ರ’ ಪ್ರಶಸ್ತಿ ಕೊಟ್ಟು ಗೌರವಿಸುತ್ತದೆ.
ಜೇಮ್ಸ್ ಬಾಂಡ್ ಅಂತ ಅಜಿತ್ ದೊವಲ್ ಅವರನ್ನು ಕರೆಯುವುದು ಯಾಕೆಂದರೆ, ದೊವಲ್ ಪಾಕಿಸ್ತಾನದ ಲಾಹೋರ್ ನಲ್ಲಿ ಮುಸಲ್ಮಾನನಂತೆ ವೇಷ ಬದಲಿಸಿಕೊಂಡು ಬರೋಬ್ಬರಿ 7 ವರ್ಷ ಗೂಢಚಾರಿಯಂತೆ ಕೆಲಸ ಮಾಡಿದ್ದಾರೆ. ಆ ಸಮಯದಲ್ಲಿ ಪಾಕಿಸ್ತಾದ ಅಣ್ವಸ್ತ್ರದ ಕುರಿತಾದ ಮಹತ್ವದ ಸಂಗತಿಗಳನ್ನು ಭಾರತ ಸರ್ಕಾರಕ್ಕೆ ರವಾನೆ ಮಾಡಿದ್ದಾರೆ. ಪಾಕಿಸ್ತಾನದ ವಿಪರ್ಯಾಸವೋ ಏನೋ ಗೂಢಚಾರಿಯಂತೆ ಕೆಲಸ ಮಾಡಿದ ನಂತರ ಅದೇ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಕಛೇರಿಯಲ್ಲಿ ಕೂಡ ಅಜಿತ್ ದೊವಲ್ ಕಾರ್ಯ ನಿರ್ವಹಿಸಿದ್ದಾರೆ.
ಈಶಾನ್ಯ ಭಾರತದಲ್ಲಿ ಚೀನಾ ಪ್ರಾಯೋಜಕತ್ವದಲ್ಲಿ ನಡೆಯುತ್ತಿದ್ದ ಭಯೋತ್ಪಾದನಾ ಚಟುವಟಿಕೆಗಳನ್ನು ಅಜಿತ್ ದೊವಲ್ ತಮ್ಮ ಎಳೆ ವಯಸ್ಸಿನಲ್ಲೆ ಮೊಟಕುಗೊಳಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸುವ ಜೊತೆಯಲ್ಲೆ, ಉಗ್ರರನ್ನು ಮನವೊಲಿಸಿ ಭಾರತದ ಪರವಾಗಿ ಪಾಕಿಸ್ತಾನದ ವಿರುದ್ಧ ಕೆಲಸ ಮಾಡುವ ಹಾಗೆ ಮಾಡಿರುವ ಕೀರ್ತಿ ಕೂಡ ಅಜಿತ್ ದೊವಲ್ ಅವರಿಗೆ ಸಲ್ಲಬೇಕು. ರಕ್ಷಣಾ ವಿಶ್ಲೇಷಕರ ಅಂದಾಜಿನ ಪ್ರಕಾರ ದಕ್ಷಿಣ ಏಷಿಯಾಕ್ಕೆ ಸಂಬಂಧಿಸಿದಂತೆ ಭಯೋತ್ಪಾದನೆ, ಆಂತರಿಕ ರಕ್ಷಣೆ, ಗೂಢಚಾರಿಗಳ ಸಮೂಹಗಳ ಬಗ್ಗೆ interpol ಮತ್ತು ಚೀನಾಗಿಂತ ಹೆಚ್ಚಿನ ಮಾಹಿತಿ ಅಜಿತ್ ದೊವಲ್ ಅವರ ಬಳಿ ಇದೆಯಂತೆ.
ಅಜಿತ್ ದೊವಲ್ 2005 ರಲ್ಲಿ ಇಂಟೆಲಿಜೆನ್ಸ್ ಬ್ಯೂರೊ ಮುಖ್ಯಸ್ಥರಾಗಿದ್ದಾಗ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ದುಬೈನಲ್ಲಿ ಮುಗಿಸಲು ರೂಪಿಸಿದ್ದ ಯೋಜನೆಯನ್ನು ಮುಂಬೈನ ಪೊಲೀಸ್ ಇನ್ಸ್ಪೆಕ್ಟರ್ ‘ಅಸ್ಲಾಂ ಮೊಮಿನ್’ ಶತ್ರುಗಳಿಗೆ ತಿಳಿಸದಿದ್ದಿದ್ದರೆ ಇಷ್ಟೊತ್ತಿಗಾಗಲೆ ದಾವೂದ್ ದಿವಂಗತನಾಗುತ್ತಿದ್ದ!
ನಿವೃತ್ತರಾದ ನಂತರ ದೇಶ ವಿದೇಶಗಳಲ್ಲಿ Counter terrorism, internal security, fake currency, youth attraction towards terrorism ಬಗ್ಗೆ ಹತ್ತಾರು ಉಪನ್ಯಾಸಗಳನ್ನು ಕೊಟ್ಟು 2009ರಲ್ಲಿ “ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಷನ್”(ವಿಐಎಫ್)ನ ಸ್ಥಾಪನೆ ಮಾಡಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಹೆಗ್ಗಳಿಕೆ ಅಜಿತ್ ದೊವಲ್ ಅವರಿಗೆ ಸೇರಬೇಕು.
2014ರಲ್ಲಿ ಅಧಿಕಾರಕ್ಕೆ ಬಂದ NDA ಸರ್ಕಾರ ತೆಗೆದುಕೊಂಡ ಮೊಟ್ಟಮೊದಲ ನಿರ್ಧಾರಗಳಲ್ಲಿ ಒಂದು ; ಅಜಿತ್ ದೊವಲ್ ಅವರನ್ನು ರಾಷ್ಟ್ರೀಯ ರಕ್ಷಣಾ ಸಲಹೆಗಾರರನ್ನಾಗಿ(National Security Adviser) ನೇಮಕ ಮಾಡಿದ್ದು. ನೇಮಕದ ನಂತರ ಇರಾಕಿನಲ್ಲಿ 46 ನರ್ಸುಗಳನ್ನು ರಕ್ಷಿಸಿದ್ದು, ಮಯಾನ್ಮರ್ ಗಡಿಯೊಳಗೆ ನುಗ್ಗಿ ಶತ್ರುಗಳ ಸಂಹಾರ ಮಾಡಿದ್ದು, ಛೋಟಾ ರಾಜನ್ ಬಂಧನ, ದಾವೂದ್ ಇಬ್ರಾಹಿಂನ ಅನೇಕ ಆಸ್ತಿಗಳನ್ನು ಹರಾಜು ಮಾಡಿದ್ದು ಎಲ್ಲರಿಗೂ ಗೊತ್ತಿರುವ ಇತಿಹಾಸ.
ಆದರೆ ಗೊತ್ತಿರದ ವಿಷಯ ಏನು ಅಂದರೆ, ಈ ದೇಶದ ಪ್ರಧಾನಿ ದಿನಕ್ಕೆ ಹದಿನಾರು ಘಂಟೆ ಕೆಲಸ ಮಾಡುತ್ತಿದ್ದರೆ ಅಜಿತ್ ದೊವಲ್ 24/7 ಕೆಲಸ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿಗಳ ಸಾಕಷ್ಟು ಜವಾಬ್ದಾರಿಗಳನ್ನು ಅಜಿತ್ ದೊವಲ್ ನಿರ್ವಹಿಸಿ ಅವರ ಮೇಲಿರುವ ಒತ್ತಡವನ್ನು ಕಡಿಮೆ ಮಾಡುತ್ತಿದ್ದಾರೆ.
ವರದಿ – ಕಹಳೆ ನ್ಯೂಸ್