ಡಾ: ಮುರಲೀ ಮೋಹನ ಚೂಂತಾರು ಅವರು ದಂತ ವೈದ್ಯಕೀಯದಲ್ಲಿ ತಜ್ಞರಾದವರು. ಬಾಯಿ, ದವಡೆ, ಮುಖಕ್ಕೆ ಸಂಬಂಧಿಸಿದ ಶಸ್ತ್ರ ಚಿಕಿತ್ಸಜ್ಞರು. ತಮ್ಮ ಅರಿವು ಮತ್ತು ಅನುಭವಗಳ ಆಧಾರದಲ್ಲಿ ಅವರು “ಅರಿವು (ಬಾಯಿ ಕ್ಯಾನ್ಸರ್ ಮಾರ್ಗದರ್ಶಿ)” ಎನ್ನುವ ಕೃತಿಯನ್ನು ರಚಿಸಿ ಆರೋಗ್ಯ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ.
“ಬಹುಮುಖ” ಆಯಾಮವುಳ್ಳ ಇಂತಹ ಉಪಯುಕ್ತ ಕೃತಿಯೊಂದನ್ನು ರಚಿಸಿದ ಅವರು ನಿಜಕ್ಕೂ ಅಭಿನಂದನಾರ್ಹರು. 76 ಪುಟಗಳುಳ್ಳ ಈ ಸುಂದರ ಹೊತ್ತಗೆ 21 ಅಧ್ಯಾಯಗಳಲ್ಲಿ ತೆರೆದುಕೊಳ್ಳುತ್ತದೆ. ಒಂದೊಂದು ಶೀರ್ಷಿಕೆಯು ಅರ್ಥವತ್ತಾಗಿದೆ. ಬಾಯಿ ಕ್ಯಾನ್ಸರುಗಳಿಗೆ ಕಾರಣಗಳೇನು, ಬಾಯಿ ಕ್ಯಾನ್ಸರ್ ಲಕ್ಷಣಗಳೇನು, ಬಾಯಿ ಹುಣ್ಣು ಎಂದರೇನು, ಬಯೋಪ್ಸಿ ಎಂದರೇನು, ಕ್ಯಾನ್ಸರ್ ಚಿಕಿತ್ಸೆ ಹೇಗೆ, ಕ್ಯಾನ್ಸರ್ ತಡೆಗಟ್ಟುವುದು ಹೇಗೆ ಹೀಗೆ ಸ್ವಯಂ ವಿವರಣೆಯಿಂದೊಡಗೂಡಿದ ಅಧ್ಯಾಯಗಳ ಹೆಸರುಗಳು ಯಾರಿಗೆ ಯಾವುದು ಬೇಕೋ ಅದನ್ನು ಆಯ್ದುಕೊಳ್ಳುವುದಕ್ಕೆ ತುಂಬಾ ಅನುಕೂಲವಾಗುವಂತೆ ಸಂಯೋಜಿಸಲ್ಪಟ್ಟಿವೆ. ಒಟ್ಟು ಕೃತಿಗೆ ಒಂದು ಅಕಾಡಮಿಕ್ ಶಿಸ್ತನ್ನು ನೀಡುವಲ್ಲಿ ಈ ವಿಭಾಗಿಕರಣ ಪೂರಕವಾಗಿದೆ.
ಬಹಿರಂಗ ಸೌಂದರ್ಯಕಿಂತ ಇದರ ಅಂತರಂಗ ಸೌಂದರ್ಯ ಮತ್ತೂ ಮಿಗಿಲಾದುದು. ಮೇಲ್ನೋಟಕ್ಕೆ ಮತ್ತು ಒಳನೋಟಕ್ಕೆ ಒದುಗರನ್ನು ಆಕರ್ಶಿಸುವ ಪುಸ್ತಕದ ಮುಖ್ಯವಾದ ಧನಾಂಶಗಳನ್ನು ಈ ಕೆಳಗಿನಂತೆ ಸಂಗ್ರಹಿಸಬಹುದು.
1. ರೋಗದ ಕುರಿತಾದ ಸಮಗ್ರವೂ ಸಂಪೂರ್ಣವೂ ಆದ ವಿವರಗಳು.
2. ಸಂಕ್ಷಿಪ್ತವೂ ವಿಸ್ತಾರವೂ ಆಗಿರುವಂತಹ ನಿರೂಪಣೆಯ ಕೌಶಲ.
3. ಜನ ಸಾಮಾನ್ಯರಿಗೂ ಅರ್ಥವಾಗುವ ಸರಳವಾದ ಭಾಷೆ.
4. ಖಾದ್ಯೊಂದರಲ್ಲಿ ಅಲ್ಲಲ್ಲಿ ಸಿಗುವ ದ್ರಾಕ್ಷೆಗಳ ಹಾಗೆ ವಿವರಗಳ ಎಡೆಎಡೆಯಲ್ಲಿ ಸ್ವಾರಸ್ಯ್ಸದ ತುಣುಕುಗಳು.
5. ಖಚಿತವಾದ ಅಂಕೆ ಸಂಖ್ಯೆಗಳು ಮತ್ತು ಇತರ ಮಾಹಿತಿಗಳು.
6. ಸಮಾಜಮುಖಿ ಧೋರಣೆ ಎಂದರೆ ವೈದ್ಯಕೀಯ ಬರಹಗಳು ಸಮಷ್ಟಿ ಸಮಾಜವನ್ನು ತಲುಪಬೇಕು ಎನ್ನುವ ಕಾಳಜಿ.
7. ವೈದ್ಯರಿಗೂ ಆರೋಗ್ಯ ಕ್ಷೇತ್ರದಲ್ಲಿ ದುಡಿಯುವ ಸಿಬ್ಬಂದಿಗಳಿಗೂ ಮಾರ್ಗದರ್ಶಕವಾಗಬಹುದಾದ ಪರಿಣತಿ.
ವೈದ್ಯಕೀಯ ಸಾಹಿತ್ಯದಲ್ಲಿ ಇರಬೇಕಾದ ಅನೇಕ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡಿರುವ ಈ ಕೃತಿಯಲ್ಲಿ ಎಲ್ಲಕಿಂತ ಮಿಗಿಲಾಗಿ ನನ್ನ ಮನಸ್ಸನ್ನು ಸೆರೆಹಿಡಿದದ್ದು ಡಾ: ಚೂಂತಾರು ಅವರ ತಂಬಾಕು ನಿಷೇಧದ ಅನಿವಾರ್ಯತೆಯ ಕುರಿತಾದ ಕಳಕಳಿ. ವೈಯಕ್ತಿಕವಾಗಿ ನನ್ನ ವೈದ್ಯಕೀಯ ಬದುಕಿನಲ್ಲೂ ಈ ತತ್ವವನ್ನು ಸುಧೀರ್ಘ ಕಾಲದಿಂದ ನಾನು ಪ್ರತಿಪಾದಿಸುತ್ತಾ ಬಂದಿದ್ದೆನೆ. ವಾಸ್ತವವಾಗಿ ಬೇರೆ ಬೇರೆ ರೂಪದಲ್ಲಿ ಅವತರಿಸುವ ತಂಬಾಕಿನ ವಸ್ತು ವೈವಿಧ್ಯಗಳಿಂದ ಮತ್ತು ಮದ್ಯ ಸೇವನೆಯಂತಹ (ಅಲ್ಕೋಹಾಲ್) ದುಷ್ಚಟಗಳಿಂದ ದೂರವಿರುವ ಜೀವನ ಶೈಲಿಯನ್ನು ರೂಢಿಸಿಕೊಂಡರೆ ಕ್ಯಾನ್ಸರೂ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳಿಂದ ಪಾರಾಗುವುದಕ್ಕೆ ಸಾಧ್ಯವಿದೆ. ಇದು ಮನುಕುಲದ ಉದ್ದಾರಕ್ಕೆ ನೆರವಾಗಬಹುದಾದ ಶಾಂತಿ ಮಂತ್ರ.
ಆದರೆ ಈ ಸಂದೇಶವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದು ಹೇಗೆ ಎನ್ನುವುದು ಸರಕಾರದ ಮತ್ತು ಸಮಾಜದ ಮುಂದಿರುವ ಗಹನವಾದ ಸವಾಲು. ನನ್ನ ಮಿತ್ರರೊಬ್ಬರು ಸಿಗರೇಟು ಸೇದುತ್ತಾ ಕೆಲವೇ ವರ್ಷಗಳಲ್ಲಿ ಹೃದಯಾಘಾತಕ್ಕೆ ಒಳಗಾದರು. ದೇವರ ದಯದಿಂದ ನುರಿತ ಹೃದ್ರೋಗ ತಜ್ಞರಿಂದ ಚಿಕಿತ್ಸೆಯನ್ನು ಪಡೆದು ಪ್ರಾಣಾಪಾಯದಿಂದ ಪಾರಾದರು. ಆದರೆ ಈಗಲೂ ಧೂಮಪಾನವನ್ನು ಸಂಪೂರ್ಣವಾಗಿ ವರ್ಜಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎನ್ನುವಾಗ ಸಮಸ್ಯೆ ಎಷ್ಟು ಅಳವಾದದ್ದೆನ್ನುವ ಸತ್ಯದ ಅರಿವಾಗ ಬಹುದು. ಇನ್ನು ಕೆಲವರು “ಹಾಗಾದರೆ ಧೂಮಪಾನ ಮಾಡದವರಿಗೆ ಅರ್ಬುದ, ಹೃದಯಾಘಾತ ಮೊದಲಾದ ಖಾಯಿಲೆಗಳು ಬರುವುದಿಲ್ಲವೇ” ಎನ್ನುವ ಪ್ರಶ್ನೆಗಳನ್ನು ವ್ಯಂಗ್ಯವಾಗಿ ಕೇಳುವುದಿದೆ. ಕ್ಲಿಷ್ಟವಾದ ಇಂತಹ ಸಂರ್ಕೀರ್ಣವಾದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವಲ್ಲಿ ಡಾ: ಚೂಂತಾರುರವರು ಮಾಡುತ್ತಿರುವ ಪ್ರಯತ್ನ ಅತ್ಯಂತ ಸ್ತುತ್ಯರ್ಹ.
ಡಾ||ಕೆ. ರಮಾನಂದ ಬನಾರಿ,
ಕುಟುಂಬ ವೈದ್ಯರು
ಮಂಜೇಶ್ವರ-671321
ದೂ:944629726