ಓ ಮುಗಿಲ ಸಾಲುಗಳೆ ಎತ್ತ ಸಾಗುವಿರಿ
ಸೂರ್ಯ ಚಂದ್ರರ ನೋಡೆ
ಧ್ರುವತಾರೆಗಳ ಕಾಡೆ
ಬೇಗ ಓಡುವಿರಿ ಜಾರುವಿರಿ ಸಾಗದಿರಿ
ನಾ ಬರಲೆ ಹತ್ತಿರಕೆ
ಆ ಬಾನಿನೆತ್ತರಕೆ
ಮರೆಮರೆತು ಈ ಜಗದ ನೆನಪನೆಲ್ಲ
ರವಿಶಶಿಯ ಹತ್ತಿರಕೆ
ಸಿಡಿಲು ಗುಡುಗಿನ ಎತ್ತರಕೆ
ಹೊಸ ಹೊಸ ಕಲ್ಪನಾ ಸೊಬಗಿದೆಲ್ಲ
ಆ ಬಾಲರವಿ ನೆನಪಿನಂಗಳದಲ್ಲಿ
ತಾ ನಸುನಾಚಿ ನಗೆಗಡಲಿನಲ್ಲಿ
ಮೆಲುನಗೆ ಬೆಳದಿಂಗಳನು ಚೆಲ್ಲಿ
ಏಸುಕಾಲ ಕಾಯಲಿ ಅನವತರವಿಲ್ಲಿ
ಓ ಮೋಡಗಳೆ ಓಡದಿರಿ
ನೋಟದಲಿ ಓಡದೇ ಇರಿ
ಓಡದಿರಿ ತಿರುತಿರುಗಿ ನೋಡದಿರಿ
ಅಲ್ಲೆ ,ಅಲ್ಲೇ ನಿಲ್ಲಿ
ಬಿಳಿಯ ಕೇಶರಾಶಿಯ ಚೆಲ್ಲಿ
ಜಾರುವಿರಿ ಬೀಳದಿರಿ ಕರಿಕಗ್ಗತ್ತಲಲ್ಲಿ
ಓ ಮೋಡಗಳೆ, ನೀವೇ ಕರಗಿ ಹನಿಯ ಮಳೆಯಾಗುವಿರಂತೆ
ದೇವಪೂಜೆಗೆ ಕರ್ಪೂರ ಕರಕರಗಿ ನೀರುನೀರಾದಂತೆ
ನೀವಿಳೆಗೆ ಬರಬೇಕು ಬರಬರ ಮಳೆಯಾಗಿ ಕಳೆಯಾಗಿ
ಕಳೆಯಾಗಿ ಬರಬೇಕು ಫಳಫಳನೆ ಹೊಳೆದು ಕಳಕಳಿಯಾಗಿ