ಸುಳ್ಯ: ಸುಳ್ಯದ ಹಿರಿಯ ಪತ್ರಕರ್ತ ಚಂದ್ರೇಶ್ ಗೋರಡ್ಕರವರು ಕಳೆದ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಲಿವರ್ ಸಂಬಂಧಿ ಕಾಯಿಲೆಯಿಂದ ಅಸ್ವಸ್ಥರಾದ ಅವರನ್ನು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ 3 ವಾರ ಚಿಕಿತ್ಸೆ ಪಡೆದ ಅವರನ್ನು, ಲಿವರ್ ಡ್ಯಾಮೇಜ್ ಹಾಗೂ ಕಿಡ್ನಿ ವೈಫಲ್ಯಗೊಂಡಿದ್ದುದರಿಂದ ವೈದ್ಯರ ಸಲಹೆ ಮೇರೆಗೆ ವಾರದ ಹಿಂದೆ ಹಿಂತಿರುಗಿ ಕರೆತಂದು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಂದ್ರೇಶ್ ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಪಯಸ್ವಿನಿ ಪತ್ರಿಕೆ ಸಂಪಾದಕರಾಗಿ, ಬಳಿಕ ಸುಳ್ಯದಲ್ಲಿದ್ದ ಶ್ರೀ ಚಾನೆಲ್ ಕಾರ್ಯನಿರ್ವಾಹಕರಾಗಿ ದುಡಿದಿದ್ದರು. ಕೆಲವು ವರ್ಷಗಳಿಂದ ಪತ್ರಿಕಾ ವೃತ್ತಿಯಿಂದ ದೂರವಾಗಿ ಬೇರೆ ವೃತ್ತಿ ಮಾಡುತ್ತಿದ್ದರು. ಪುಸ್ತಕ ವ್ಯಾಪಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಇವರ ಪತ್ರಿಕಾ ಸೇವೆಯನ್ನು ಗುರುತಿಸಿ ಕಳೆದ ಜುಲೈ ತಿಂಗಳಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಂದರ್ಭ ಕಾರ್ಯನಿರತ ಪತ್ರಕರ್ತರ ಸಂಘ ಸನ್ಮಾನಿಸಿತ್ತು.