ಕುಮಟಾ: ರೈತರ ಸಾಲಮನ್ನ ಹೆಸರಲ್ಲಿ ಸಹಕಾರಿ ಸಂಘದ ಕಾರ್ಯದರ್ಶಿಯೋರ್ವ ರೈತರ ಖಾತೆಗೆ ಕನ್ನ ಹಾಕಿ ಕೊಟ್ಯಾಂತರ ರೂ ಲಪಟಾಯಿಸಿ ತಲೆಮರೆಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ ಈ ಭಾಗದ ರೈತರು ತಮಗೆ ಉಪಯುಕ್ತತೆಗಾಗಿ ಬೆಳೆಸಾಲವನ್ನ ತೆಗೆದುಕೊಂಡಿದ್ದರು. ಕಳೆದ ವರ್ಷ ಸಿದ್ದರಾಮಯ್ಯ ಸರಕಾರ ರೈತರ ಸಾಲಮನ್ನಾ ಮಾಡಿತ್ತು. ಬಳಿಕ ಕುಮರಾಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲೂ ರೈತರ ಸಾಲಮನ್ನ ಮಾಡಲಾಗಿತ್ತು. ಇದು ಇಲ್ಲಿನ ರೈತರಿಗೆ ಅನ್ವಯವಾಗುತ್ತಿತ್ತು.
ಹೀಗಾಗಿ ಇಲ್ಲಿನ ರೈತರು ತಮ್ಮ ಸಾಲಮನ್ನವಾಗಿದೆ ಎಂದು ಕೊಂಡಿರುವಾಗ ಇಲ್ಲಿನ ಬ್ಯಾಂಕಿನ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಇವರು ತೆಗೆದುಕೊಂಡಿದ್ದ ಸಾಲದ ಮೊತ್ತಕ್ಕಿಂತ ಒಂದು ಪಟ್ಟು ಹೆಚ್ಚು ಸಾಲ ಬರೆಸಿಕೊಂಡು ಉಳಿದ ಮೊತ್ತವನ್ನು ತನ್ನ ಖಾತೆಗೆ ಇಳಿಸಿ ರೈತರ ಹೆಸರಿನಲ್ಲಿದ್ದ ಹಣಕ್ಕೆ ಕನ್ನ ಹಾಕಿದ್ದಾನೆ.
ರೈತರು ಸಾಲಮನ್ನದ ಹಣವನ್ನು ಪಡೆದುಕೊಂಡಿದ್ದಾರೆ ಎನ್ನೋದಕ್ಕೆ ರೈತರಿಗೆ ಯ್ಯಾಮಾರಿಸಿ ಅವರಿಂದ ಬುದ್ದಿವಂತಿಕೆಯಲ್ಲಿ ದಾಖಲೆಪತ್ರಕ್ಕೆ ಸಹಿ ಕೂಡಾ ಮಾಡಿಕೊಂಡಿದ್ದಾನೆ.
ಇವೆಲ್ಲ ವಿಚಾರ ಈಗ ರೈತರ ಗಮನಕ್ಕೆ ಬಂದಿದ್ದು ಕೂಡಲೆ ತಮಗೆ ಸೇರಬೇಕಾದ ಕೊಟ್ಯಾಂತರ ರೂ ಹಣವನ್ನ ಮರಳಿ ಕೊಡಬೇಕು ಎಂದು ಆಗ್ರಹಿಸಿ ಕುಮಟಾ ಕೆಡಿಸಿಸಿ ಬ್ಯಾಂಕ್ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತರು ಕಾರ್ಯದರ್ಶಿ ಲಕ್ಷ್ಮಣ ಪಟಗಾರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.