ಸಿಲಿಕಾನ್ ಸಿಟಿಯಲ್ಲಿ ‘ನಮ್ಮೂರ ಹಬ್ಬ’ದ ಸಂಭ್ರಮ | ಯಕ್ಷದಿಗ್ಗಜ ಚಿಟ್ಟಾಣಿಯವರಿಗೆ ಕಾರ್ಯಕ್ರಮ ಸಮರ್ಪಣೆ – ಕಹಳೆ ನ್ಯೂಸ್
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕರಾವಳಿ ಸಂಭ್ರಮ. ಉದ್ಯಾನಗನರಿ ಬೆಂಗಳೂರಿನಲ್ಲಿ ನಮ್ಮೂರ ಹಬ್ಬ ಮೇಳೈಸುತ್ತಿದೆ.
ಬಾಯಲ್ಲಿ ನೀರೂರಿಸೋ ಕರಾವಳಿಯ ಪುಳಿಮುಂಚಿ ಕೋರಿ ರೊಟ್ಟಿ, ಬಾಂಗುಡಾ, ಅಂಜಲ್ ಫಿಶ್ ಫ್ರೈ ಒಂದೆಡೆಯಾದರೆ ಇತ್ತ ಕರಾವಳಿಯ ಹುಲಿ ವೇಷ ಕುಣಿತ, ಬುಡಕಟ್ಟು ಜನರ ಡೋಲು ಬಾರಿಸುವ ಮೂಲಕ ಕುಣಿತ ಜನರನ್ನು ಹುಚ್ಚೆದ್ದು ಕುಣಿಸುತ್ತಿತ್ತು.
ಈ ಬಾರಿಯೂ ಕರಾವಳಿ ಭಾಗದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ನಮ್ಮೂರ ಹಬ್ಬವನ್ನು ಜಯನಗರ ಶಾಲಿನಿ ಮೈದಾನದಲ್ಲಿ ಆಯೋಜಿಸಲಾಗಿದೆ. ಅಂದ ಹಾಗೆ ದಕ್ಷಿಣ ಕನ್ನಡದ ಅತ್ಯದ್ಭುತ ಯಕ್ಷಗಾನ ಕಲಾವಿದ, ಯಕ್ಷಗಾನಕ್ಕೆ ಅಪಾರ ಕೊಡುಗೆಯನ್ನಿತ್ತ ಚಿಟ್ಟಾಣಿ ರಾಮಚಂದ್ರ ಅವರಿಗೆ ನಮ್ಮೂರ ಹಬ್ಬವನ್ನು ಅರ್ಪಿಸಲಾಗಿದೆ.
ನಮ್ಮೂರ ಹಬ್ಬದಲ್ಲಿ ಕರಾವಳಿಯ ಬಸಳೆ ಸೊಪ್ಪು, ಬದನೆಕಾಯಿ, ಅಲಸಂಡೆ, ಸಿಹಿ ಗೆಣಸು, ಸಿಹಿಕುಂಬಳಕಾಯಿ ಸೇರಿದಂತೆ ನಾನಾ ಬಗೆಯ ತರಕಾರಿಗಳು ತಿನಿಸುಗಳು ಗ್ರಾಹಕರಿಗೆ ಸಿಗುತ್ತಿದೆ. ವಿಶೇಷ ಅಂದ್ರೆ ಮಲ್ಪೆಯಿಂದ ನೇರವಾಗಿ ತಂದಿರುವ ಫಿಶ್ ಸ್ಪೆಷಲ್. ಜನರಂತೂ ಫುಲ್ ಖುಷಿಯಾಗಿದ್ದಾರೆ. ಕರಾವಳಿಯ ಫುಡ್ ಮೆಲ್ಲುತ್ತಾ ಎಂಜಾಯ್ ಮಾಡ್ತಿದ್ದಾರೆ.
ಇಷ್ಟೆ ಅಲ್ಲ ಇದರ ಜೊತೆಗೆ ವಿವಿಧ ಮಳಿಗೆಗಳು ಕೈ ಬೀಸಿ ಕರೆಯುತ್ತಿವೆ. ಹೀಗಾಗಿ ಒಂದೇ ಸೂರಿನಡಿ ಕರಾವಳಿಯ ತಿಂಡಿ ತಿನಿಸು ಸಂಸ್ಕೃತಿ ಕಲೆ ಅನಾವರಣಗೊಂಡಿದೆ. ಮಂಗಳೂರಿಗರು ಹಳೆ ನೆನಪಿಗೆ ಜಾರುತ್ತಿದ್ದಾರೆ. ಅಂದ ಹಾಗೆ ನಾಳೆಯು ನಮ್ಮೂರ ಹಬ್ಬ ನಡೆಯಲಿದೆ.