ಬೆಳ್ತಂಗಡಿ: ಪುತ್ತೂರು, ಸುಳ್ಯ ತಾಲೂಕಿನಾದ್ಯಂತ ಈಗಾಗಲೇ ಸುರಿದ ಭೀಕರ ಮಳೆಗೆ ಹಲವಾರು ಜನರು ತಮ್ಮ ಕೃಷಿ, ಮನೆ ಮಠಗಳನ್ನು ಕಳೆದುಕೊಂಡಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆಯಿಂದ ಈ ಪ್ರದೇಶದ ಜನರು ಕೆಲಸವಿಲ್ಲದೆಯೂ ಕಂಗಾಲಾಗಿದ್ದಾರೆ.
ಈ ಸಂಕಷ್ಟಗಳ ಮತ್ತು ಸಮಸ್ಯೆಗಳ ನಡುವೆ ಇಲ್ಲಿನ ಜನರು ಹೇಳುತ್ತಿರುವ ಬಹುದೊಡ್ಡ ಸಮಸ್ಯೆ ಮೈಕ್ರೋಫಿನಾನ್ಸ್, ಸ್ವಸಹಾಯ ಸಂಘಗಳು ಸೇರಿದಂತೆ ಬಡ್ಡಿಗೆ ಹಣ ನೀಡಿದವರಿಂದ ಉಂಟಾಗುತ್ತಿರುವ ಕಿರುಕುಳ ಹಾಗೂ ಬೆದರಿಕೆಗಳ ಬಗ್ಗೆ.
ಒಂದು ತುರ್ತು ಪರಿಸ್ಥಿತಿಯಲ್ಲಿ ಉಪಾಯವಿಲ್ಲದೇ ಈ ಬಡ್ಡಿಗೆ ಹಣ ನೀಡುವ ದಂದೆಗೆ ಬಿದ್ದರೆ ಮತ್ತೆ ಅದರಿಂದ ಹೊರಬರುವುದೇ ಕಷ್ಟ ಎನ್ನುತ್ತಾರೆ ಇಲ್ಲಿನ ಜನರು. ಆದರೆ ವಿಧಿಯಿಲ್ಲದೆ ಅನಿವಾರ್ಯವಾಗಿ ಬಹುತೇಕರು ಇದರಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಈ ಮದ್ಯೆ ಋಣಭಾಧ್ಯೆ ಕಾಯಿದೆ ಜಾರಿಯಾಗುತ್ತದೆ ಎಂಬ ಸುದ್ದಿಯೊಂದು ಹಬ್ಬಿದ್ದು, ಹಲವಾರು ಕಡೆಗಳಲ್ಲಿ ಸಾಲಪಡೆದ ಬಹುತೇಕರು ಇದರ ಹಿಂದೆ ಬಿದ್ದಿದ್ದಾರೆ. ಆದರೆ ಯಾವುದೇ ಒಬ್ಬ ಅಧಿಕಾರಿಗಳಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲಿ ಸೇರಿದಂತೆ ಈ ಮೈಕ್ರೋಫಿನಾನ್ಸ್, ಸ್ವಸಹಾಯ ಸಂಘಗಳ ಅಧಿಕಾರಿಗಳು ರಾತ್ರಿ ವೇಳೆಯಲ್ಲಿ ಸಾಲಪಡೆದವರ ಮನೆಗಳಿಗೆ ಭೇಟಿ ನೀಡಿ ಕಿರುಕುಳ ಮತ್ತು ಬೆದರಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಬೆಳ್ತಂಗಡಿಯ ವೇಣೂರು ಪೋಲಿಸ್ ಠಾಣೆಯಲ್ಲಿ ದೂರುಗಳು ದಾಖಲಾದ ಬಗ್ಗೆ ತಿಳಿದು ಬಂದಿದೆ.
ಒಂದು ದೂರಿನ ಪ್ರಕಾರ ಖಾಸಗಿ ಮೈಕ್ರೋಫಿನಾನ್ಸ್ ಬೆಳ್ತಂಗಡಿ ಶಾಖೆಯ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ರಾತ್ರಿ ಸುಮಾರು ಏಳುವರೆ ಗಂಟೆಗಳ ಸುಮಾರಿಗೆ ಮನೆಯೊಂದಕ್ಕೆ ಬಂದು ಮಹಿಳೆಯರಿಗೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಪೋಲಿಸ್ ಠಾಣೆಯಲ್ಲಿ ಗ್ರಾಹಕರೋರ್ವರು ದೂರನ್ನು ನೀಡಿದ್ದಾರೆ.