ಮಂಗಳೂರು: ಮಂಗಳೂರು-ಬೆಂಗಳೂರು ಪೆಟ್ರೋಲಿಯಂ ಸಾಗಾಟದ ಪೈಪ್‍ಲೈನ್ ಕೊರೆದು ಪೆಟ್ರೋಲ್ ಕಳವಿಗೆ ಯತ್ನಿಸಿದ ಎರಡು ಪ್ರಕರಣಗಳನ್ನು ಭೇದಿಸಿದ ಬಜ್ಪೆ ಪೊಲೀಸರು, ಸೋಮವಾರ ತಡರಾತ್ರಿ ವಾಮಂಜೂರು ಚೆಕ್‍ಪೊಸ್ಟ್ ಸಮೀಪ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ತಾಲೂಕಿನ ಮರಕಡ ನಿವಾಸಿಗಳಾದ ಆರ್ಮುಗಂ (39), ರಮೇಶ (35) ಬಂಧಿತ ಆರೋಪಿಗಳು.
ಎಚ್‍ಪಿಸಿಎಲ್ ಕಂಪೆನಿಯಿಂದ ಅಳವಡಿಸಿದ ಮಂಗಳೂರು-ಬೆಂಗಳೂರು ಮಾರ್ಗದ ಪೆಟ್ರೋಲಿಯಂ ಸಾಗಾಟದ ಪೈಪ್‍ಲೈನ್ ಬಜ್ಪೆ ಠಾಣಾ ವ್ಯಾಪ್ತಿಯ ಮಳವೂರು ಗ್ರಾಮದ ಕಿನ್ನಿಮುಗೇರು ಎಂಬಲ್ಲಿ ಹಾದು ಹೋಗಿದೆ. ಈ ಪೈಪ್‍ಲೈನ್‍ನ್ನು 2018ರ ನವೆಂಬರ್ 4ರಂದು ಸೆಕ್ಯುರಿಟಿ ಸಿಬ್ಬಂದಿ ಪರಿಶೀಲಿಸಿದಾಗ, ಭೂಮಿ ಒಳಗೆ ಅಳವಡಿಸಿದ್ದ ಪೈಪ್‍ನಿಂದ ದುಷ್ಕರ್ಮಿಗಳು ಪೆಟ್ರೋಲ್ ಕಳವಿಗೆ ಯತ್ನಿಸಿರುವುದು ಬೆಳಕಿಗೆ ಬಂದಿತ್ತು.
2019ರ ಜುಲೈ 11ರ ಮಧ್ಯಾಹ್ನ 12:15ರಿಂದ ಜು.12ರಂದು ಬೆಳಗ್ಗೆ 9:30 ಗಂಟೆಯ ಮಧ್ಯೆ ಮಂಗಳೂರು ತಾಲೂಕಿನ ಮಳವೂರು ಗ್ರಾಮದ ರೈಲ್ವೆ ಹಳಿಯ ಬಳಿ ಭೂಮಿಯೊಳಗೆ ಹಾದುಹೋಗಿದ್ದ ಪೆಟ್ರೋಲಿಯಂ ಪೈಪ್‍ನ್ನು ದುಷ್ಕರ್ಮಿಗಳು ಕೊರೆದಿದ್ದರು. ಪೈಪ್‍ಗೆ ಎರಡು ಇಂಚಿನ ಸಣ್ಣ ಪೈಪ್‍ನ್ನು ಅಳವಡಿಸಿ, ಅದರ ಮೂಲಕ ಪೆಟ್ರೋಲ್ ಕಳವು ಯತ್ನ ನಡೆದಿತ್ತು. ಈ ಬಗ್ಗೆ ಜು.12ರಂದು ‘ಪೆಟ್ರೋನೆಟ್’ ಕಂಪೆನಿಯ ರಾಜನ್ ಎಂಬವರು ನೀಡಿದ ದೂರಿನಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಬಜ್ಪೆ ಪೊಲೀಸರು, ಆ.26ರಂದು ರಾತ್ರಿ 8:45ಕ್ಕೆ ವಾಮಂಜೂರು ಚೆಕ್‍ಪೊಸ್ಟ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದರು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ತಮ್ಮ ಸಹಚರರೊಂದಿಗೆ ಸೇರಿ ಎರಡೂ ಪ್ರಕರಣಗಳಲ್ಲಿ ಪೈಪ್‍ಲೈನ್‍ನ್ನು ಕೊರೆದು ಪೆಟ್ರೋಲ್ ಕಳವು ಮಾಡಲು ಪ್ರಯತ್ನಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಜ್ಪೆ ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಪೈಪ್‍ಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶು ಗಿರಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್, ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಗೌಡ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜ್ಪೆ ಠಾಣಾ ಪೊಲೀಸ್ ನಿರೀಕ್ಷಕ ಕೆ.ಆರ್. ನಾಯಕ್, ಪಿಎಸ್ಸೈಗಳಾದ ಸತೀಶ್ ಎಂ.ಪಿ, ಕಮಲಾ, ಸಹಾಯಕ ಉಪನಿರೀಕ್ಷಕ ರಾಮ ಪೂಜಾರಿ, ಎಚ್.ಸಿ.ಗಳಾದ ಚಂದ್ರಮೋಹನ್, ಪುರುಷೋತ್ತಮ, ಹೊನ್ನಪ್ಪ ಗೌಡ, ರಾಜೇಶ್, ಸುಧೀರ್ ಶೆಟ್ಟಿ, ಸಂತೋಷ್ ಸುಳ್ಯ, ಪಿಸಿಗಳಾದ ಮಂಜುನಾಥ, ವಕೀಲ ಲಮಾಣಿ, ಉಮೇಶ್ ಭಾಗವಹಿಸಿದ್ದರು.