ಬೆಂಗಳೂರು: ದೇವಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಡ್ರೆಸ್ ಕೋಡ್ ಪಾಲನೆ ಮಾಡಬೇಕೆಂದು ಮುಜರಾಯಿ ಇಲಾಖೆ ದೇಗುಲಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ.
ಮಹಿಳಾ ಸಿಬ್ಬಂದಿಗೆ ಸಲ್ವಾರ್ ಕಮೀಜ್, ಕುರ್ತಾಗಳನ್ನು ನಿಷೇಧಿಸಲಾಗಿದೆ. ಪುರಷರಿಗೆ ಜೀನ್ಸ್ ಪ್ಯಾಂಟ್‍ಗಳನ್ನು ಧರಿಸದಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಹಿಳಾ ಸಿಬ್ಬಂದಿ ನೀಲಿ ಸೀರೆ , ಬಿಳಿ ಬ್ಲೌಸ್ ಮತ್ತು ಪುರುಷ ಸಿಬ್ಬಂದಿಗೆ ನೀಲಿ ಶರ್ಟ್, ಸೆಕ್ಯೂರಿಟಿ ಗಳಿಗೆ ಖಾಕಿ ಪ್ಯಾಂಟ್ ಖಾಕಿ ಶರ್ಟ್ ಧರಿಸಲು ಆದೇಶಿಸಲಾಗಿದೆ. ಈ ಡ್ರೆಸ್ ಕೋಡ್ ಕಡ್ಡಾಯವಿದ್ದರೂ ಇದೂವರೆಗೂ ಪಾಲನೆ ಆಗುತ್ತಿರಲಿಲ್ಲ. ಹಾಗಾಗಿ ಮುಜರಾಯಿ ಇಲಾಖೆ ಮರು ಸುತ್ತೋಲೆಯನ್ನು ಹೊರಡಿಸಿದೆ.
ಮುಜರಾಯಿ ಇಲಾಖೆಯ ಈ ಆದೇಶ ಎ ಮತ್ತು ಬಿ ಗ್ರೇಡ್ ದೇವಾಲಯಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಹಿಂದೆ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಡ್ರೆಸ್ ಕೋಡ್ ಮಾಡಬೇಕೆಂದು ಚಿಂತಿಸಲಾಗಿತ್ತು. ಆರಂಭದಲ್ಲಿ ಭಕ್ತರಿಗೆ ಡ್ರೆಸ್ ಕೋಡ್ ವಿಧಿಸುವುದರಿಂದ ಬೇರೆ ರಾಜ್ಯ ಮತ್ತು ವಿದೇಶಗಳಿಂದ ಬರುವ ಭಕ್ತಾದಿಗಳ ಸಂಖ್ಯೆ ಇಳಿಮುಖವಾಗಲಿದೆ ಎಂಬ ಉದ್ದೇಶದಿಂದ ಯೋಚನೆಯನ್ನು ಆರಂಭದಲ್ಲಿಯೇ ಕೈಬಿಡಲಾಯಿತು.
ವರದಿ : ಕಹಳೆ ನ್ಯೂಸ್