Sunday, November 24, 2024
ಸುದ್ದಿ

ವಿವೇಕಾನಂದ ಕಾಲೇಜಿನ ಎಂಸಿಜೆ ವಿದ್ಯಾರ್ಥಿಗಳ ‘ವಿನೂತನ’ ಪಾಕ್ಷಿಕ ಲೋಕಾರ್ಪಣೆ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿಗಳು ತಯಾರಿಸಿದ ‘ವಿನೂತನ’ ಪ್ರಾಯೋಗಿಕ ಪಾಕ್ಷಿಕ ಪತ್ರಿಕೆಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ರಿಕೋದ್ಯಮ ಎಂದರೆ ನಿಂತ ನೀರಲ್ಲ, ಅಲ್ಲಿ ಅವಕಾಶಗಳು ಹೆಚ್ಚು. ಆದರೆ ಅದರ ಉದ್ದಗಲಗಳನ್ನು ಅರಿತುಕೊಂಡು ಮುಂದುವರೆಯಬೇಕು. ಆಕಸ್ಮಿಕವಾಗಿ ಒದಗಿಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಆಗ ಜೀವನದಲ್ಲಿ ಏನಾದರು ಸಾಧಿಸಲು ಸಾಧ್ಯ. ಪತ್ರಿಕೋದ್ಯಮದಲ್ಲಿ ಭಾಷೆಯ ಮೇಲೆ ಹಿಡಿತ ಸಾಧಿಸಿಕೊಂಡರೆ ನಿರುದ್ಯೋಗದ ಭಯ ಇರುವುದಿಲ್ಲ. ಪರಿಶುದ್ಧ ಭಾಷೆ ಹಾಗೂ ಬರವಣಿಗೆಯೇ ಆಸ್ತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ವೃತ್ತಿಜೀವನಕ್ಕೆ ಕಾಲಿಡುವಾಗ ಭಾಷೆ, ಬರವಣಿಗೆ ಹಿರಿಮೆಯಾಗಿ ನಿಮ್ಮ ಜೀವನವನ್ನು ಕಟ್ಟಿಕೊಡುತ್ತದೆ. ಬದಲಾಗುತ್ತಿರುವ ಈ ಸಮಾಜವನ್ನು ಧೈರ್ಯವಾಗಿ ಎದುರಿಸಲು ಸಹಾಯ ಮಾಡುತ್ತದೆ. ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದಲ್ಲಿ ನಮ್ಮ ಪ್ರತಿಭೆ ಅಥವಾ ಕಲೆಯ ಮೂಲಕ ಗುರುತಿಸಿಕೊಳ್ಳಲು ಹಲವಾರು ಅವಕಾಶಗಳಿದೆ, ಆದರೆ ಅದನ್ನು ಬಳಸುವ ರೀತಿ ನಮ್ಮ ಕೈಯಲ್ಲೇ ಇದೆ. ಎಂದು ಹಂಪನಕಟ್ಟೆ ಮಂಗಳೂರು ವಿಶ್ವವಿದ್ಯಾನಿಲಯ ಪದವಿ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಗುರುಪ್ರಸಾದ್ ಟಿ.ಎನ್. ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾಲೇಜಿನಲ್ಲಿ ಸಿಗುವ ಪ್ರತಿಯೊಂದು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡು ವೃತ್ತಿ ಜೀವನದಲ್ಲಿ ದೃಢವಾಗಿ ನೆಲೆಕಟ್ಟಿಕೊಳ್ಳುವಂತೆ ಆಗಬೇಕು. ಅದೇ ರೀತಿ ಅವಕಾಶ ಎನ್ನುವಂತಹದ್ದು ಎಲ್ಲರಿಗೂ ಕಾಯುತ್ತಿರುವುದಿಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ ಇರುತ್ತದೆ. ಅದನ್ನು ಸೂಕ್ತ ಸಂದರ್ಭದಲ್ಲಿ ಸರಿಯಾಗಿ ಬಳಸಿಕೊಂಡಾಗ ಯಶಸ್ಸು ಲಭಿಸಲು ಸಾಧ್ಯ ಎಂದರು.
ಐಕ್ಯೂಎಸಿ ಘಟಕದ ಸಂಯೋಜಕ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಎಚ್.ಜಿ. ಮಾತನಾಡಿ, ಈ ಪಾಕ್ಷಿಕ ಹಲವು ವಿವಿಧತೆಯನ್ನು ಹೊಂದಿದೆ. ಹಾಗೂ ಎಲ್ಲಾ ಕ್ಷೇತ್ರಕ್ಕೆ ಸಂಬಂಧಿಸಿ ಲೇಖನಗಳು ಇದರಲ್ಲಿ ಇರುವುದರಿಂದ ಯಾವುದೇ ಪಾಕ್ಷಿಕಕ್ಕೆ ಕಡಿಮೆಯಿಲ್ಲ ಎಂದು ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ. ಜಯರಾಮ್ ಭಟ್ ಮಾತನಾಡಿ, ಬರವಣಿಗೆ ಹಾಗೂ ಓದುವಿಕೆ ಎಂದೂ ಒಂದು ವಿಷಯಕ್ಕೆ ಸೀಮಿತವಲ್ಲ. ಅಂತೆಯೇ ಅದಕ್ಕೆ ಯಾವುದೇ ವಯಸ್ಸಿನ ಮಿತಿಯೂ ಇಲ್ಲ. ಓದುವ ಆಸಕ್ತಿ ಇದ್ದರೆ ಮಕ್ಕಳ ಕಥೆಯಿಂದ ಒಂದು ದೊಡ್ಡ ಅಂಕಣದವರೆಗೂ ಓದುವ ವಿಚಾರಗಳು ತಿಳಿಯುತ್ತದೆ ಹಾಗೂ ಮನರಂಜನೆ ದೊರೆಯುತ್ತದೆ ಇದನ್ನು ನಿಜವಾಗಿ ಬರವಣಿಗೆ ಎನ್ನುತ್ತಾರೆ ಎಂದು ಹೇಳಿದರು.

ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಬಿ. ಶುಭ ಹಾರೈಸಿದರು. ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ, ವಿವಿಧ ವಿಭಾಗಗಳ ಉಪನ್ಯಾಸಕರು ಈ ಸಂದರ್ಭ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಪವಿತ್ರ ಭಟ್ ಪ್ರಾರ್ಥಿಸಿದರು. ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದು, ಸ್ವಾಗತಿಸಿದರು. ಉಪನ್ಯಾಸಕಿ ರಾಧಿಕಾ ಕಾನತಡ್ಕ ವಂದಿಸಿದರು. ವಿದ್ಯಾರ್ಥಿನಿ ಲಿಖಿತಾ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.