ಇಸ್ಲಮಾಬಾದ್: ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ನಂತರ ಕೆಂಡಾಮಂಡಲವಾಗಿರುವ ನೆರೆರಾಷ್ಟ್ರ ಪಾಕಿಸ್ತಾನ ಯುದ್ದಕ್ಕೆ ಸಜ್ಜಾದಂತಿದೆ. ಪದೇ ಪದೇ ಯುದ್ದದ ಬಗ್ಗೆ ಮಾತಾಡುತ್ತಿರುವ ಪಾಕ್ ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಕ್ಷಿಪಣಿ ಪರೀಕ್ಷೆ ಮಾಡಲು ತಯಾರಿ ನಡೆಸಿದೆ.
ಕರಾಚಿಯ ಸೋನ್ಮೈನಿ ಬಳಿ ಪಾಕ್ ಈ ಕ್ಷಿಪಣಿ ಪರೀಕ್ಷೆ ನಡೆಸಲು ಸಿದ್ದತೆ ನಡೆಸಿದೆ ಎಂದು ಮೂಲಗಳು ವರದಿ ಮಾಡಿದೆ. ಇದೇ ಕಾರಣದಿಂದಾಗಿ ಕರಾಚಿ ಮೂಲಕ ಸಂಚರಿಸುವ ಭಾರತೀಯ ವಿಮಾನಗಳ ಮೂರು ವಾಯು ಮಾರ್ಗವನ್ನು ನಿರ್ಬಂಧಿಸಲಾಗಿದೆ. ಆಗಸ್ಟ್ 28ರಂದು ಜಾರಿಯಾಗಿರುವ ಈ ನಿರ್ಬಂಧ ಆಗಸ್ಟ್ 31ರವರೆಗೆ ಮುಂದುವರಿಯಲಿದೆ. ಕೇವಲ ನಾಲ್ಕು ದಿನಗಳಿಗೆ ವಾಯು ಮಾರ್ಗ ನಿರ್ಬಂಧ ವಿಧಿಸಿರುವ ಪಾಕ್‍ನ ಈ ನಡೆ ಅನುಮಾನಕ್ಕೆ ಕಾರಣವಾಗಿತ್ತು. ಈ ನಾಲ್ಕು ದಿನಗಳಲ್ಲೇ ಪಾಕಿಸ್ತಾನ ಕ್ಷಿಪಣಿ ಪರೀಕ್ಷೆ ನಡೆಸಲಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್ ಭಾರತ – ಪಾಕ್ ಯುದ್ದ ಸಂಭಾವನೆಯ ಬಗ್ಗೆ ಮಾತಾಡಿದ್ದು, ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ಉಭಯ ದೇಶಗಳ ನಡುವೆ ಯುದ್ದ ನಡೆಯಲಿದೆ ಎಂದು ಹೇಳಿಕೆ ನೀಡಿದ್ದಾರೆ.