ನಾವೆಲ್ಲ ಬಹಳ ಅಭಿಮಾನ ಪಡುವ ಮಂಗಳೂರು ವಿಶ್ವವಿದ್ಯಾಲಯ ಕಳೆದ ಕೆಲವು ವರ್ಷಗಳಿಂದ ತನ್ನ ಶೈಕ್ಷಣಿಕ ಸಾಧನೆಗಳಿಂದ ಹೆಸರುಗಳಿಸುವ ಬದಲು ವಿವಾದಾತ್ಮಕ ಪಠ್ಯಪುಸ್ತಕಗಳಿಂದ ಸಾರ್ವಜನಿಕರ ಮುಂದೆ ತಲೆತಗ್ಗಿಸುವಂತಾಗಿದೆ.
ಪದವಿ ಹಂತದ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿ ಕಳೆದ ಮೂರು ವರ್ಷಗಳಲ್ಲಿ ವಿವಾದಿತ ಪಠ್ಯಗಳನ್ನು ಪುಸ್ತಕದಲ್ಲಿ ಸೇರಿಸಿ ಕೊನೆಗೆ ಸಾರ್ವಜನಿಕರ ಹಾಗೂ ವಿದ್ಯಾರ್ಥಿ ಸಂಘಟನೆಗಳ ವಿರೋಧ ಒತ್ತಾಯಕ್ಕೆ ಮಣಿದು ಹಿಂಪಡೆದ ನಿದರ್ಶನಗಳಿವೆ. ಡಾ.ಶಿವರಾಮ ಶೆಟ್ಟಿಯವರು ಪ್ರಧಾನ ಸಂಪಾದಕರಾಗಿ, ಡಾ.ನಾಗಪ್ಪ ಗೌಡ ಅವರು ಕಾರ್ಯನಿರ್ವಾಹಕ ಸಂಪಾದಕರಾದ ಈ ಮಂಡಳಿ ಹಿಡನ್ ಅಜೆಂಡಾವನ್ನು ಇರಿಸಿಕೊಂಡೆ ಪಠ್ಯ ಪುಸ್ತಕದಲ್ಲಿ ನಕಾರಾತ್ಮಕ ಸಂಗತಿಗಳನ್ನು ಸೇರಿಸುತ್ತಿದ್ದಾರೆ. ಕನ್ನಡದ ಕಾಳಜಿಗಿಂತ ವೈಯಕ್ತಿಕ ಹಿತಾಸಕ್ತಿ ಮುಖ್ಯವಾಗಿ ಕಾಣಿಸಿಕೊಂಡಿದೆ.
ನಿವೃತ್ತಿಯ ಅಂಚಿನಲ್ಲಿದ್ದ ಡಾ.ಶಿವರಾಮ ಶೆಟ್ಟಿ ಯವರು ತಯಾರಿಸಿದ ಸಾಹಿತ್ಯ ಮೀಮಾಂಸೆ ಪುಸ್ತಕವು ಮತ್ತೊಮ್ಮೆ ಅನಗತ್ಯ ವಿವಾದವನ್ನು ಸೃಷ್ಟಿಸಿದೆ. ಮೊದಲನೆಯದಾಗಿ ಪಠ್ಯಪುಸ್ತಕದ 32 ಪುಟಗಳು ಕೃತಿಚೌರ್ಯವಾಗಿದೆ. ಹೀಗೆ ಮಾಡಿ ಸೇರಿಸಿದ ಕನ್ನಡ ಮೀಮಾಂಸೆ ಎನ್ನುವ ವಿಭಾಗ ಅಧ್ಯಾಪಕರ ವಿರೋಧದ ನಡುವೆ ಸೇರ್ಪಡೆಯಾಗಿದೆ. ಕನ್ನಡದ ಹೆಸರಿನಲ್ಲಿ ಮೀಮಾಂಸೆಗೆ ಯಾವ ಸಂಬಂಧವನ್ನೂ ಹೊಂದಿರದ ಭೌದ್ಧ ತತ್ವಶಾಸ್ತ್ರದ ತರ್ಕಗಳನ್ನು ಮಂಡಿಸಲಾಗಿದೆ. ಇದು ಯಾವ ನೆಲೆಯಿಂದ ನೋಡಿದರೂ ಕನ್ನಡಕ್ಕೆ ಸಂಬಂಧಿಸಿದ ವಿಚಾರಧಾರೆಯಲ್ಲ.
ವೇದವನ್ನು ವಿರೋಧಿಸಿ ಸಂಸ್ಕೃತ ವನ್ನು ವಿರೋಧಿಸಿ ಕನ್ನಡದ ಹೆಸರಿನಲ್ಲಿ ಅವಾಂತರವನ್ನು ಸೃಷ್ಟಿಸಿ ಅದನ್ನೆ ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಬೋಧಿಸುವ ಪ್ರವೃತ್ತಿ ನಮ್ಮ ನಾಡಿನ ನಾಳೆಗಳ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.
ಕನ್ನಡ ಮೀಮಾಂಸೆ ಎನ್ನುವುದಕ್ಕೆ ಈ ವರೆಗೂ ಕನ್ನಡ ವೈಚಾರಿಕ ವಲಯದಲ್ಲಿ ಮನ್ನಣೆ ಬಂದಿಲ್ಲ. ಪಠ್ಯ ವಾಗಿ ಓದಿದ ವಿಚಾರ ವಿದ್ಯಾರ್ಥಿಗಳು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉಪಯೋಗಕ್ಕೆ ಇಲ್ಲ.ಯಾಕೆಂದರೆ ಅಲ್ಲಿ ಇನ್ನೂ ಕನ್ನಡ ಮೀಮಾಂಸೆಗೆ ಸ್ವೀಕಾರಾರ್ಹತೆ ಬಂದಿಲ್ಲ. ಹೀಗಾಗಿ ಈ ಪಠ್ಯ ಹೊಸ ತಲೆಮಾರಿನ ವಿದ್ಯಾರ್ಥಿಗಳನ್ನು ದಾರಿತಪ್ಪಿಸಿ ಒಂದಿಬ್ಬರ ಹಿತಾಸಕ್ತಿಗೆ ವಿದ್ಯಾರ್ಥಿಗಳ ಭವಿಷ್ಯ ವನ್ನು ವಿಶ್ವವಿದ್ಯಾಲಯದ ಹೆಸರನ್ನು ಕೆಡಿಸಲಾಗುತ್ತಿದೆ.
ಈ ಕೂಡಲೆ ಈ ಬಗ್ಗೆ ಸಂಪಾದಕ ಮಂಡಳಿಯ ಈ ಪ್ರವೃತ್ತಿಯ ಬಗ್ಗೆ ಗಂಭೀರವಾದ ಆಲೋಚನೆ ಮಾಡಿ ಈ ಪಠ್ಯ ಭಾಗವನ್ನು ಕೂಡಲೆ ಪಠ್ಯದಿಂದ ಹಿಂಪಡೆಯಬೇಕ ಅವಶ್ಯಕತೆಯಿದೆ. ಸಂಬಂಧಿಸಿದ ಸಂಪಾದಕ ಮಂಡಳಿಯ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವ ಕೂಗು ಕೇಳುತ್ತಿದೆ.
ಸೆಪ್ಟೆಂಬರ್ 2018 ಕ್ಕೆ ಡಾ. ಶಿವರಾಮ ಶೆಟ್ಟಿ ಯವರ ಅಧ್ಯಯನ ಮಂಡಳಿ ಅವಧಿ ಮುಗಿದರೂ ಮುಂದಿನ ಸಮಿತಿಗೆ ಪಠ್ಯ ರಚನೆಯ ಅವಕಾಶವನ್ನು ಬಿಟ್ಟುಕೊಡದಿರುವುದು ಗಂಭೀರ ಲೋಪವಾಗಿದೆ. ಅವರು ನಿವೃತ್ತಿಯಾದರೂ ಈಗಲೂ ಮುಂದಿನ ಸೆಮಿಸ್ಟರ್‍ನ ಪಠ್ಯ ಪುಸ್ತಕ ರಚನೆಯ ಕಾರ್ಯದಲ್ಲಿ ತೊಡಗಿಕೊಂಡಿರುವುದು ವಿಶ್ವವಿದ್ಯಾಲಯಕ್ಕೆ ಶೋಭೆಯಲ್ಲ. ಈ ಕುರಿತು ನೀವು ಕೂಡಲೆ ಗಮನಹರಿಸಬೇಕಾಗಿ ವಿನಂತಿ. ಇಲ್ಲವಾದರೆ ವಿದ್ಯಾರ್ಥಿಗಳೂ ಸೇರಿದಂತೆ ಕನ್ನಡದ ಕಾಳಜಿಯುಳ್ಳವರು ಹೋರಾಟಕ್ಕೆ ಇಳಿದರೆ ಆಶ್ಚರ್ಯವಿಲ್ಲ.
ಡಾ.ರೋಹಿಣಾಕ್ಷ ಶಿರ್ಲಾಲು