ಕರ್ನಾಟಕ ಋಣ ಪರಿಹಾರ ಕಾಯ್ದೆಗೆ ಸೆಪ್ಟೆಂಬರ್ 22ರ ಒಳಗೆ ಅರ್ಜಿ ಸಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ – ಕಹಳೆನ್ಯೂಸ್
ಕರ್ನಾಟಕ ಋಣ ಪರಿಹಾರ ವಿಧೇಯಕ – 2018 ಜುಲೈ 23 ರಿಂದ ಜಾರಿಗೆ ಬಂದಿರುತ್ತದೆ. ಅದರಂತೆ ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು, ಮತ್ತು ದುರ್ಬಲ ವರ್ಗದ ಜನರು ವಾರ್ಷಿಕ ಆದಾಯ 1,20,000 ರೂ. ಗಳನ್ನು ಮೀರದಿರುವ ಖಾಸಗಿ ಲೇವದೇವಿಗಾರರು ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಕಾಯ್ದೆಯ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.
ಕರ್ನಾಟಕ ಋಣ ಪರಿಹಾರ ಕಾಯ್ದೆಯು ಸಾಲಗಾರನೇ ಬಿಟ್ಟುಕೊಟ್ಟ ಕೃಷಿ ಭೂಮಿಯ ಸ್ವತ್ತಿನಿಂದ ಬಾಕಿ ಇರುವ ಬಾಡಿಗೆ, ಭೂಕಂದಾಯದ ಹಿಂಬಾಕಿ ವಸೂಲಿ, ನ್ಯಾಯಾಲಯದ ಬಿಕರಿ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಪಾವತಿಸಬೇಕಾದ ಯಾವುದೇ ಕಂದಾಯ, ತೆರಿಗೆ, ಉಪಕಾರ ನಂಬಿಕೆ ದ್ರೋಹದ ಯಾವುದೇ ಹೊಣೆಗಾರಿಕೆಗೆ ಸಲ್ಲಿಸಿದ ಸೇವೆಗಾಗಿ ಸಂಬಳ, ಸರ್ಕಾರಿ ಕಂಪನಿ, ಭಾರತೀಯ ಜೀವಾ ವಿಮಾ ನಿಗಮ, ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960ರ ಅಡಿಯಲ್ಲಿ ನೋಂದಾಯಿತವಾಗಿರುವ ಅತೀ ಸಣ್ಣ ಹಣಕಾಸು ಸಂಸ್ಥೆಗಳು, ಚಿಟ್ ಫಂಡ್ ಕಾಯ್ದೆಯಡಿ ನೋಂದಣಿಗೊಂಡ ಚಿಟ್ ಕಂಪನಿಗಳು ಮುಂತಾದವು ಕರ್ನಾಟಕ ಋಣ ಪರಿಹಾರ ಕಾಯ್ದೆ 2018ರ ವ್ಯಾಪ್ತಿಗೆ ಒಳಪಡುವುದಿಲ್ಲ.
ಈ ವಿಚಾರದಲ್ಲಿ ಪುತ್ತೂರು ಉಪವಿಭಾಗದ ವ್ಯಾಪ್ತಿಗೆ ಬರುವ ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳಲ್ಲಿನ ಅರ್ಹ ಸಾರ್ವಜನಿಕರು ನಿಗದಿತ ನಮೂನೆ-02ರ ಅಗತ್ಯ ದಾಖಲಾತಿಯೊಂದಿಗೆ ಋಣ ಪರಿಹಾರ ಅಧಿಕಾರಿಯಾದ ಸಹಾಯಕ ಆಯುಕ್ತರು, ಸಹಾಯಕ ಆಯುಕ್ತರ ಕಛೇರಿ, ಪುತ್ತೂರು ಉಪವಿಭಾಗ ,ಪುತ್ತೂರು ಈ ಕಚೇರಿಗೆ ಸಲ್ಲಿಸಬೇಕು.
ಸಾಲಗಾರರು ಅರ್ಜಿಯೊಂದಿಗೆ ಆಧಾರಕಾರ್ಡ್, ಲೇವಾದೇವಿದಾರರು ನೀಡಿರುವ ರಶೀದಿ ಪ್ರತಿ, ಪಡಿತರ ಚೀಟಿ, ತಹಶೀಲ್ದಾರರಿಂದ ಪಡೆದ ಸಣ್ಣಹಿಡುವಳಿದಾರ ದೃಡೀಕರಣ/ಭೂ ರಹಿತ ಕೃಷಿ ಕಾರ್ಮಿಕರ ದೃಡೀಕರಣ/ಆದಾಯ ದೃಡೀಕರಣ ಇತ್ಯಾದಿ ದಾಖಲೆಗಳೊಂದಿಗೆ ಸೆಪ್ಟೆಂಬರ್ 22 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರ ಕಛೇರಿ, ಪುತ್ತೂರು ಉಪವಿಭಾಗ ಸಂಪರ್ಕಿಸಬೇಕು ಎಂದು ಸಹಾಯಕ ಆಯುಕ್ತರು ಉಪವಿಭಾಗ ಪುತ್ತೂರು ಇವರ ಪ್ರಕಟಣೆ ತಿಳಿಸಿದೆ.