ಕಾಂಗ್ರೆಸ್ ಟ್ರಬಲ್ ಶೂಟರ್, ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯದ ಸಮನ್ಸ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸುವ ಮೂಲಕ ಇಡಿ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಡಿಕೆಶಿ ಹಾಗೂ ಆಪ್ತರ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದ ಸಮಯದಲ್ಲಿ ಸುಮಾರು 8.59 ಕೋಟಿ ರೂ. ಹಣ ಜಪ್ತಿ ಮಾಡಲಾಗಿತ್ತು. ಈ ಹಣ ಅಕ್ರಮವೋ ಅಥವಾ ಸಕ್ರಮವೋ ಎಂಬ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕಿತ್ತು. ಈ ಕುರಿತು ತನಿಖೆ ನಡೆಸುವ ಸಲುವಾಗಿ ಇಡಿ ನೀಡಿದ್ದ ಸಮನ್ಸ್ ವಿರುದ್ಧ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಮುಗಿಸಿದ್ದ ನ್ಯಾಯಾಲಯ ಆಗಸ್ಟ್ 29ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಡಿಕೆಶಿ ವಿರುದ್ದ ಸೆಕ್ಷನ್ 120 ಬಿ ಆರೋಪವಿದೆ. ಇದರ ಜತೆಗೆ ಮತ್ತೊಂದು ಅಧಿಸೂಚಿತ ಕೇಸ್ ಇರಬೇಕೆಂದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಆದರೆ ಇದೀಗ ಈ ಹಣ ತನಿಖೆಗೆ ಯೋಗ್ಯ ಎಂದು ಹೈಕೋರ್ಟ್ ಹೇಳಿದ್ದು, ಇಡಿ ಸಮನ್ಸ್ ವಿರುದ್ಧ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕನಕಪುರ ಶಾಸಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೈಕೋರ್ಟ್ ಭಾರೀ ಆಘಾತ ನೀಡಿದೆ. ಹೈಕೋರ್ಟ್ ಆದೇಶದ ನಂತರ ವಕೀಲರ ಭೇಟಿಗೆ ತೆರಳಿರುವ ಡಿ.ಕೆ.ಶಿವಕುಮಾರ್, ಮುಂದಿನ ದಾರಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ.