Sunday, November 24, 2024
ಸುದ್ದಿ

ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ – ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಗಸ್ಟ್ 29ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಏರ್ಪಡಿಸಲಾದ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ನಡೆಯಿತು.

ಪೋಷಕರು ತಮ್ಮ ಮಕ್ಕಳೊಂದಿಗೆ ದಿನಾಲೂ ಮುಕ್ತವಾಗಿ ಮಾತನಾಡುವ ಪ್ರವೃತ್ತಿ ಬೆಳೆಸಿಕೊಂಡಿರಬೇಕು. ಮಕ್ಕಳ ಜೊತೆ ಅನಗತ್ಯ ಕಟ್ಟು ಪಾಡುಗಳನ್ನು ಇಟ್ಟುಕೊಂಡರೆ ಭವಿಷ್ಯದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಗಬಹುದು. ಹೆತ್ತವರಿಗೆ ತಮ್ಮ ಮಕ್ಕಳ ಬಗ್ಗೆ ಪ್ರೀತಿ ಇರುವುದು ಸಹಜ. ಇದರ ಜೊತೆಯಲ್ಲಿ ಮಕ್ಕಳ ದಿನ ನಿತ್ಯದ ಆಗು ಹೋಗುಗಳ ಕುರಿತು ಸದಾ ಎಚ್ಚರದಿಂದಿರಬೇಕು. ಮಕ್ಕಳಿಗೆ ನಿಜ ಜೀವನಕ್ಕೂ ಸಿನಿಮಾ ಜೀವನಕ್ಕೂ ವ್ಯತ್ಯಾಸವಿರುವುದನ್ನು ತಿಳಿಸಬೇಕು. ಮಕ್ಕಳು ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸುವುದು ಬಹಳ ಅಗತ್ಯ ಎಂದು ಪುತ್ತೂರು ವಿಭಾಗದ ಡಿವೈಎಸ್‍ಪಿ ದಿನಕರ ಶೆಟ್ಟಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ವಿದ್ಯಾರ್ಥಿಗಳೇ ಒಂದು ಶಿಕ್ಷಣ ಸಂಸ್ಥೆಯ ಪ್ರಮುಖ ಆಸ್ತಿ. ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಸದಾ ಬದ್ಧವಾಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಪೋಷಕರು ಮತ್ತು ಶಿಕ್ಷಕರು ಜವಾಬ್ದಾರಿ ವಹಿಸಿ, ಮುಂದುವರಿಯುವ ಅನಿವಾರ್ಯತೆಯಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ಆಲ್ಫ್ರೆಡ್ ಜೆ ಪಿಂಟೊ ಮಾತನಾಡಿ, ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಉತ್ತಮ ಮೌಲ್ಯಗಳನ್ನೂ ಕಲಿಸಿಕೊಡುತ್ತಿದೆ. ಇಲ್ಲಿ ಯಾವುದೇ ಜಾತಿ ಧರ್ಮಗಳ ಬೇಧ ಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲಾಗುತ್ತಿದೆ ಎಂದರು. ಸಭೆಯಲ್ಲಿ ಕಾರ್ಯದರ್ಶಿಯಾದ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಡ್ವಿನ್ ಡಿ’ಸೋಜ ವಾರ್ಷಿಕ ವರದಿ ವಾಚಿಸಿದರು. ಖಜಾಂಜಿಯಾದ ವಾಣಿಜ್ಯಶಾಸ್ತ್ರ ವಿಬಾಗದ ಸಹಾಯಕ ಪ್ರಾಧ್ಯಾಪಕಿ ಪ್ರೇಮಲತಾ ಕೆ ಆಯವ್ಯಯ ಪತ್ರ ಮಂಡಿಸಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮ್ಯಾಕ್ಸಿಂ ಕಾರ್ಲ್ ರಕ್ಷಕ-ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಉದಯ ಕೆ ವಿದ್ಯಾರ್ಥಿಗಳ ಪ್ರಗತಿ ಪರಾಮರ್ಶೆ ಕುರಿತು ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಪೋಷಕರು ಮತ್ತು ಶಿಕ್ಷಕರು ತರಗತಿವಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಪರಾಮರ್ಶೆ ನಡೆಸಿದರು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಆ್ಯಂಟನಿ ಒಲಿವೆರಾ ಸ್ವಾಗತಿಸಿದರು. ವ್ಯವಹಾರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ವಂದಿಸಿದರು. ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಗಣೇಶ ಭಟ್ ಕಾರ್ಯಕ್ರಮ ನಿರೂಪಿಸಿದರು.