ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ರಚಿಸಲಾದ 49 ತಾಲ್ಲೂಕುಗಳಲ್ಲಿ ಹೊಸ ಹುದ್ದೆಗಳ ಸೃಷ್ಟಿಗೆ ಎರಡು ವರ್ಷಗಳ ಕಾಲ ಮುಂದೂಡಲು ಸೂಚಿಸಲಾಗಿದೆ. ಕಳೆದ 2017-18ನೇ ಸಾಲಿನ ಆಯವ್ಯಯದಲ್ಲಿ 49 ಹೊಸ ತಾಲೂಕುಗಳನ್ನು ಘೋಷಿಸಲಾಗಿತ್ತು.
ಆ ತಾಲೂಕುಗಳ ಕಚೇರಿಗಳಿಗೆ ಅಗತ್ಯ ಹುದ್ದೆಗಳನ್ನು ಸೃಷ್ಟಿಸಲು ಆರ್ಥಿಕ ಇಲಾಖೆ ಅನುಮತಿ ಕೋರಲಾಗಿದ್ದು, ಇದಕ್ಕೆ ಪ್ರತಿಯಾಗಿ ಆರ್ಥಿಕ ಇಲಾಖೆ ಹಳೆಯ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದೆ.
ಜತೆಗೆ ಎರಡು ವರ್ಷಗಳ ನಂತರ ಅಗತ್ಯ ಹುದ್ದೆಗಳ ಸೃಜನೆಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಹೊಸ ತಾಲೂಕುಗಳಲ್ಲಿನ ಹೊಸ ಹುದ್ದೆಗಳ ಸೃಜನೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯ ತಿಳಿಸಿದ್ದಾರೆ.