ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳುತ್ತಿದ್ದಂತೆ 2014ರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಾಯಕತ್ವ ವಹಿಸಿಕೊಂಡರು. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ನಾಯಕತ್ವ ವಹಿಸಿಕೊಂಡರು. ವಿದಾಯದ ವೇಳೆ ಧೋನಿ ಟೆಸ್ಟ್ ಕ್ರಿಕೆಟ್‍ನ ಅತ್ಯಂತ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದು ಎಲ್ಲರಿಗೆ ತಿಳಿದಿರುವ ವಿಚಾರವಾಗಿದೆ.
ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ 64 ಟೆಸ್ಟ್ ಪಂದ್ಯಗಳಲ್ಲಿ 27 ಆಟಗಳಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಧೋನಿ, ಭಾರತ ಕ್ರಿಕೆಟ್‍ನ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದರು. ಈಗ ವಿರಾಟ್ ಕೊಹ್ಲಿ, ಧೋನಿ ದಾಖಲೆ ಬದಿಗಟ್ಟುವ ಉತ್ಸಾಹದಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲೆ ಗೆಲುವು ಸಾಧಿಸಿತ್ತು ಕೊಹ್ಲಿ ಪಡೆ. ಈ ವೇಳೆ ಕೊಹ್ಲಿ ಧೋನಿ ಸಾಧನೆಗೆ ಸಮಬಲ ಸಾಧಿಸಿದ್ದರು. 47 ಟೆಸ್ಟ್ ಪಂದ್ಯದ ನಾಯಕತ್ವ ವಹಿಸಿರುವ ಕೊಹ್ಲಿ 27 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಕೊನೆಯ ಟೆಸ್ಟ್‍ನಲ್ಲಿ ಭಾರತ ಗೆಲುವು ಸಾಧಿಸಿದರೆ ಕೊಹ್ಲಿ ಹೆಸರಿಗೆ ಇನ್ನೊಂದು ದಾಖಲೆ ಸೇರಲಿದೆ.