ಚಿಕ್ಕಮಗಳೂರು : ಭಾರೀ ಮಳೆಗೆ ಬಂದ್ ಆಗಿದ್ದ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಇಂದಿನಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ಕಾರು, ಬೈಕ್, ಆಂಬುಲೆನ್ಸ್, ಮಿನಿ ಬಸ್ ಸೇರಿದಂತೆ ಸಣ್ಣ ವಾಹನಗಳ ಸಂಚಾರ ಆರಂಭವಾಗಿದೆ.
ಚಿಕ್ಕಮಗಳೂರಿನಿಂದ ಮಂಗಳೂರು, ಉಡುಪಿ, ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಚಾರ್ಮಾಡಿ ಘಾಟ್ ಭಾರೀ ಮಳೆಯ ಕಾರಣದಿಂದ ಬಂದ್ ಆಗಿತ್ತು. ಇದರಿಂದ ಗಣೇಶ ಚತುರ್ಥಿಗೆ ಊರಿಗೆ ಹೋಗುವ ಮಂಗಳೂರು ಭಾಗದ ಜನರಿಗೆ ಅನುಕೂಲವಾದಂತಾಗಿದೆ.
ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಮೂಡಿಗೆರೆ, ಕೊಪ್ಪ, ಕಳಸ, ಶೃಂಗೇರಿಯಲ್ಲಿ ಕಳೆದ ತಿಂಗಳು ಭಾರೀ ಮಳೆಯಾಗಿತ್ತು. ಇದರಿಂದ ರಸ್ತೆಗೆ ಗುಡ್ಡ ಕುಸಿದು, ಸೇತುವೆಗಳು ಮುರಿದುಬಿದ್ದು ಸಂಚಾರ ವ್ಯವಸ್ಥೆ ಕಡಿತಗೊಂಡಿತ್ತು. ಕರಾವಳಿ ಭಾಗಕ್ಕೆ ಹಾಸನದಿಂದ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ಬಂದ್ ಆಗಿತ್ತು. ಇತ್ತ ಚಿಕ್ಕಮಗಳೂರಿನ ಮೂಡಿಗೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಕೂಡ ಬಂದ್ ಆಗಿತ್ತು. ಇದರಿಂದಾಗಿ ಜನರು ಸಂಚಾರಕ್ಕೆ ರಸ್ತೆ ಮಾರ್ಗವಿಲ್ಲದೆ ಪರದಾಡುವಂತಾಗಿತ್ತು.
ಇಂದು ಬೆಳಗ್ಗೆ 6 ಗಂಟೆಯಿಂದ ಸಂಚಾರ ಆರಂಭವಾಗಿದ್ದು, ಸಂಜೆ 6ರವರೆಗೆ ಮಾತ್ರ ಸಂಚರಿಸಬಹುದಾಗಿದೆ. ಸರ್ಕಾರಿ ಬಸ್ ಸೇರಿದಂತೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಈ ಘಾಟ್‍ನಲ್ಲಿ ಸಾಕಷ್ಟು ಕಡೆ ಗುಡ್ಡ ಕುಸಿದ ಕಾರಣ ಪ್ರಯಾಣಿಕರು ಸಂಚರಿಸುವುದು ಸೂಕ್ತವಲ್ಲ ಎಂದು ಜಿಲ್ಲಾಡಳಿತ ಸೆಪ್ಟೆಂಬರ್ 14ರವರೆಗೆ ವಾಹನ ಸಂಚಾರ ನಿಷೇಧಿಸಿತ್ತು. ಆದರೆ, ಪ್ರಯಾಣಿಕರ ಅನುಕೂಲಕ್ಕಾಗಿ ಲಘು ವಾಹನಗಳಿಗೆ ಅವಕಾಶ ನೀಡಲಾಗಿದೆ. ಈ ಕುರಿತು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.