ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿಯನ್ನೊಳಗೊಂಡು ಉಪ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಝೀರೋ ಟ್ರಾಫಿಕ್ ಸೌಲಭ್ಯ ಒದಗಿಸುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾದ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗೃಹ ಸಚಿವ ಎಂ.ಬಿ. ಪಾಟೀಲ್ ಝೀರೋ ಟ್ರಾಫಿಕ್ ಸೌಲಭ್ಯವನ್ನು ತಿರಸ್ಕರಿಸಿದ್ದರು. ಅದೇರೀತಿ ನೂತನ ಬಿಜೆಪಿ ಸರ್ಕಾರದ ಡಿಸಿಎಂ ಅಶ್ವಥ್ ನಾರಾಯಣ ಕೂಡ ತಮಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡವೆಂದು ಹೇಳಿದ್ದರು.
ಇದೀಗ ಬಿಜೆಪಿ ಸರ್ಕಾರದ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ತಮಗೆ ಝೀರೋ ಟ್ರಾಫಿಕ್ ಸೌಲಭ್ಯ ನೀಡುವುದು ಬೇಡವೆಂದು ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೊಮ್ಮಾಯಿ, ಪೊಲೀಸ್ ಇಲಾಖೆ ನನಗೆ ನೀಡಿದ ಝೀರೋ ಟ್ರಾಫಿಕ್‍ನಿಂದ ಸಾಮಾನ್ಯ ಜನರಿಗೆ ತೊಂದರೆಗಳಾಗಿದ್ದು ಕಂಡುಬಂದಿದೆ. ಈ ಕುರಿತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ನಾನು ಹೋಗುವ ಮಾರ್ಗದಲ್ಲಿ ಇನ್ನುಮುಂದೆ ಝೀರೋ ಟ್ರಾಫಿಕ್ ನೀಡಬೇಡಿ ಹಾಗೂ ಪ್ರತಿಬಾರಿ ಭೇಟಿ ನೀಡಿದಾಗ ಇಲಾಖೆಯಿಂದ ನೀಡುವ ಗಾರ್ಡ್ ಆಫ್ ಹಾನರ್ ಬೇಡವೆಂದು ಸೂಚಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
Basavaraj S Bommai
@BSBommai
ಪೋಲಿಸ್ ಇಲಾಖೆ ನೀಡಿದ #ಜೀರೋಟ್ರಾಫಿಕ್ ನಿಂದ ಸಾಮಾನ್ಯ ಜನರಿಗೆ ತುಂಬಾ ತೊಂದರೆಗಳಾಗಿದ್ದು ಕಂಡುಬಂದಿದ್ದು ಈ ಕುರಿತು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳಗೆ ಮಾತನಾಡಿ ನಾನು ಹೋಗುವ ಮಾರ್ಗದಲ್ಲಿ ಇನ್ನು ಮುಂದೆ #ZeroTraffic ನೀಡಬೇಡಿ ಹಾಗೂ ಪ್ರತಿಬಾರಿ ಭೇಟಿನೀಡಿದಾಗ ಇಲಾಖೆಯಿಂದ ನೀಡುವ ಗಾರ್ಡ್ ಆಫ್ ಹಾನರ್‍ನ್ನು ಬೇಡವೆಂದು ಸೂಚಿಸಿದ್ದೇನೆ.
ಬಸವರಾಜ ಬೊಮ್ಮಾಯಿ ಅವರ ಈ ನಡೆಗೆ ಹಲವರು ಮೆಚ್ಚುಗೆ ಸೂಚಿಸಿದ್ದು, ರಾಜಕಾರಣಿಗಳು ಈ ರೀತಿ ನಿರ್ಧಾರ ತೆಗೆದುಕೊಂಡರೆ ಮಹಾನಗರಗಳಲ್ಲಿ ಅವರು ಸಂಚರಿಸುವಾಗ ಉಂಟಾಗುವ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ ಎಂದಿದ್ದಾರೆ. ಬೊಮ್ಮಾಯಿ ನಿನ್ನೆ ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಸಂಚಾರ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾದ ಕಾರಣ ಝೀರೋ ಟ್ರಾಫಿಕ್ ನೀಡಬೇಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಝೀರೋ ಟ್ರಾಫಿಕ್‍ಗೆ ಗುಡ್ ಬೈ ಹೇಳಿದ ಬೆನ್ನೆಲ್ಲೆ ಇದೀಗ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಇದೇ ನಿರ್ಧಾರ ತೆಗೆದುಕೊಂಡಿದ್ದಾರೆ.