ಮಂಗಳೂರು: ಹಲವು ತಿಂಗಳಿಂದ ತಲೆಮರೆಸಿಕೊಂಡಿದ್ದ ಅಂತರ್ ರಾಜ್ಯ ದನಕಳವು ಪ್ರಕರಣದ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಮಂಗಳೂರು ತಾಲೂಕಿನ ಕೋಟೇಶ್ವರ ನಿವಾಸಿ ಮುಹಮ್ಮದ್ ಹನೀಫ್ ಯಾನೆ ಗಂಧ ಹನೀಫ್ (45) ಬಂಧಿತ ಆರೋಪಿ.
ಆರೋಪಿಯು ಕೇರಳ, ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳು ಸೇರಿದಂತೆ ವಿವಿಧೆಡೆ ದನಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಕಳೆದ ಎರಡು ತಿಂಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದನ ಕಳ್ಳತನ ಪ್ರಕರಣದಲ್ಲಿಯೂ ಈತ ಪ್ರಮುಖ ಆರೋಪಿಯಾಗಿದ್ದ. ಅಲ್ಲದೆ, ಆರೋಪಿಯ ವಿರುದ್ಧ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ದನಕಳವು ಪ್ರಕರಣದಲ್ಲಿ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ನಿರ್ದೇಶನದಂತೆ ಡಿಸಿಪಿಗಳಾದ ಅರುಣಾಂಕ್ಶು ಗಿರಿ, ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀನಿವಾಸ ಗೌಡ ಆರ್. ನೇತೃತ್ವದ ರೌಡಿ ನಿಗ್ರಹ ದಳದ ಅಧಿಕಾರಿ ಸಿಬ್ಬಂದಿ ಮುಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್, ಶರಣ್ ಕಾಳಿ ಭಾಗವಹಿಸಿದ್ದರು.