ಕೇಂದ್ರದಿಂದ ಎನ್‍ಆರ್‍ಸಿ ಅಂತಿಮ ಪಟ್ಟಿ ಬಿಡುಗಡೆ, 19 ಲಕ್ಷ ಜನ ಸೂಕ್ತ ಪುರಾವೆ ನೀಡದಿದ್ರೆ ಗಡಿಪಾರು ಸಂಭವ – ಕಹಳೆ ನ್ಯೂಸ್
ನವದೆಹಲಿ : ಇಂದು ಕೇಂದ್ರ ಸರ್ಕಾರ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‍ಆರ್‍ಸಿ) ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಮೂಲಗಳ ಪ್ರಕಾರ http://www.nrcassam.nic.in ಈ ವೆಬ್‍ಸೈಟ್‍ನಲ್ಲಿ ಪಟ್ಟಿ ಬಿಡುಗಡೆ ಆಗಿದೆ. ಅಂತಿಮ ಪಟ್ಟಿಯಲ್ಲಿ 19 ಲಕ್ಷ ಜನರನ್ನು ಹೊರಗಿಡಲಾಗಿದ್ದು, 3.11 ಕೋಟಿ ಜನರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಕಳೆದ ವರ್ಷ ಜುಲೈ 30ರಂದು ಎನ್‍ಆರ್‍ಸಿ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಕೋಟ್ಯಾಂತರ ಮಂದಿಯನ್ನು ಸೇರ್ಪಡೆ ಮಾಡಲಾಗಿತ್ತು. ಆದರೆ, ಇದರಲ್ಲಿ 1,02,462 ಜನರು ಅನರ್ಹರು ಎಂದು ಘೋಷಿಸಿ, ಎನ್‍ಆರ್‍ಸಿ ಪಟ್ಟಿಯಿಂದ ಹೊರಗಿಡಲಾಗಿತ್ತು.
ಅಸ್ಸಾಂ ರಾಜ್ಯ ನೆರೆಯ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿದೆ. ಹೀಗಾಗಿ ಇಲ್ಲಿ ಬಾಂಗ್ಲಾದೇಶದವರು ಅಕ್ರಮವಾಗಿ ನೆಲೆಸಿದ್ದಾರೆ. ಅಕ್ರಮ ವಲಸಿಗರಿಂದ ಇಲ್ಲಿ ಹೆಚ್ಚಿನ ಹಿಂಸಾಚಾರ, ಗಲಭೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಿಗಾದಲ್ಲಿ ಅಸ್ಸಾಂನಲ್ಲಿ ಮಾತ್ರ ಎನ್‍ಆರ್‍ಸಿ ನೊಂದಣಿ ಕಾರ್ಯ ನಡೆಸಿತ್ತು. ಪಟ್ಟಿಗೆ ಸೇರ್ಪಡೆಯಾಗಲು ಅನರ್ಹರಾದವರಿಗೆ ಜು.5ರಿಂದ ವಿಚಾರಣೆ ನಡೆಸಲಾಗಿತ್ತು. ಅವರು ವಿಚಾರಣಾ ಕೇಂದ್ರಕ್ಕೆ ಆಗಮಿಸಿ, ಈ ದೇಶದ ನಾಗರಿಕತ್ವವನ್ನು ಸಾಬೀತು ಮಾಡಲು ಸೂಕ್ತ ಪುರಾವೆ ನೀಡಬೇಕಾಗಿತ್ತು.
ಎನ್‍ಆರ್‍ಸಿ ಪಟ್ಟಿಯಲ್ಲಿ ಸೇರ್ಪಡೆಯಾಗದಿದ್ದವರನ್ನು ಗಡೀಪಾರು ಮಾಡುವ ಸಂಭವವಿದೆ ಎನ್ನಲಾಗಿದೆ. ಆದರೆ, ಈ ಕುರಿತು ಕೇಂದ್ರ ಸರ್ಕಾರ ಬಾಂಗ್ಲಾ ಸರ್ಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಕಿದೆ.