ಬ್ಯಾಂಕಿಂಗ್ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಹಲವು ಬದಲಾವಣೆ ತಂದಿದೆ. ದೇಶದ ತೆರಿಗೆ ವ್ಯವಸ್ಥೆಯಲ್ಲಿಯೂ ಸೆಪ್ಟೆಂಬರ್ 1ರಿಂದ ಅನೇಕ ಬದಲಾವಣೆಗಳಾಗಲಿವೆ.
ಬ್ಯಾಂಕ್, ಸಹಕಾರಿ ಬ್ಯಾಂಕ್, ಪೋಸ್ಟ್ ಆಫೀಸ್ ಖಾತೆಗಳಿಂದ ವರ್ಷವೊಂದರಲ್ಲಿ ಒಂದು ಕೋಟಿ ರೂ.ಗೂ ಹೆಚ್ಚು ಹಣ ವಿತ್ ಡ್ರಾ ಮಾಡಿದಲ್ಲಿ ಶೇಕಡ 2 ರಷ್ಟು ಟಿಡಿಎಸ್ ಪಾವತಿಸಬೇಕಿದೆ. ನಗದು ಹರಿದಾಡುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಜೀವ ವಿಮೆಗೂ ಟಿಡಿಎಸ್ ವಿಧಿಸಲಾಗುವುದು. ವಿಮೆಯ ಮೆಚುರಿಟಿ ಮೊತ್ತದ ನಿವ್ವಳ ಆದಾಯದ ಮೇಲೆ ಶೇಕಡ 5ರಷ್ಟು ಟಿಡಿಎಸ್ ಕಡಿತಗೊಳ್ಳಲಿದೆ. ನೀವು ಪಾವತಿಸಿದ ಒಟ್ಟು ವಿಮೆ ಕಂತುಗಳನ್ನು ನಿಮ್ಮ ಕೈಸೇರಿದ ಮೊತ್ತದಿಂದ ಕಳೆದಾಗ ಬರುವ ಮೊತ್ತವನ್ನು ನಿವ್ವಳ ಆದಾಯ ಎಂದು ಪರಿಗಣಿಸಲಾಗುವುದು. ಆ ಆದಾಯದ ಮೇಲೆ ಶೇಕಡ 5 ರಷ್ಟು ಟಿಡಿಎಸ್ ಕಡಿತಗೊಳಿಸಲಾಗುವುದು.
ಇನ್ನು ಸಣ್ಣಪುಟ್ಟ ಹಣ ವರ್ಗಾವಣೆಗಳ ಮೇಲೆ ಕಣ್ಣಿಡಲಾಗುವುದು. ಖಾತೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಮೊತ್ತದ ವಹಿವಾಟು ನಡೆದಲ್ಲಿ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುವುದು.
ಇದನ್ನು 50 ಸಾವಿರ ರೂ. ಮತ್ತು ಅದಕ್ಕಿಂತ ದೊಡ್ಡ ಮೊತ್ತಕ್ಕೆ ನಿಗದಿ ಮಾಡಲಾಗಿದೆ. ಇನ್ನು ಮುಂದೆ ಸಣ್ಣಪುಟ್ಟ ಹಣ ವರ್ಗಾವಣೆ ವಿವರಗಳನ್ನು ಕೂಡ ಐಟಿ ಇಲಾಖೆ ಕೇಳಿದಾಗ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ನೀಡಬೇಕಿದೆ. ಕಳೆದ ಬಜೆಟ್‍ನಲ್ಲಿ ಈ ಕುರಿತಾಗಿ ನಿಯಮವನ್ನು ರೂಪಿಸಲಾಗಿದೆ ಎಂದು ಹೇಳಲಾಗಿದೆ.