ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ತಂತ್ರಜ್ಞಾನ ಆಧಾರಿತ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ – ಕಹಳೆ ನ್ಯೂಸ್
ಪುತ್ತೂರು: ಯಾವುದೇ ತರಬೇತಿಗಳು ಯಶಸ್ವಿಯಾಗುವುದು ವಿಷಯದ ಬಗೆಗಿನ ಆಸಕ್ತಿ ಮತ್ತು ಹೊಸ ವಿಷಯಗಳನ್ನು ಕಲಿಯುವ ತುಡಿತ ಇದ್ದಾಗ ಮಾತ್ರ. ವೇಗದಿಂದ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ನಮ್ಮನ್ನು ನಾವು ತೊಡಗಿಸಿಕೊಂಡು ತಂತ್ರಜ್ಞಾನಗಳನ್ನು ಕಲಿಯುತ್ತಾ ನಾವೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಡಾ.ಸುಧಾರಾವ್ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ವಿವೇಕಾನಂದ ಪದವಿಪೂರ್ವ ಕಾಲೇಜು ಇದರ ಸಹಯೋಗದೊಂದಿಗೆ ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರುಗಳಿಗೆ ಆಯೋಜಿಸಲಾಗಿರುವ ತಂತ್ರಜ್ಞಾನ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಬರೇ ಮಾಹಿತಿಯನ್ನು ಪೇರಿಸುವ ಕ್ರಿಯೆಯಲ್ಲ. ವಿದ್ಯಾರ್ಥಿಗಳಲ್ಲಿ ಈಗಾಗಲೇ ಇರುವಂಥ ಸತ್ವವನ್ನು ಅರಳಿಸುವ ಪ್ರಕ್ರಿಯೆ. ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ, ಅವನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರದ್ದು. ಆದ್ದರಿಂದ ಅವರ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದರೊಂದಿಗೆ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು.ಈ ಮೂಲಕ ಆತ್ಮವಿಶ್ವಾಸದ ಭಾವನೆಗೆ ದಾರಿ ಮಾಡಿಕೊಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ಪ್ರತಿಯೊಬ್ಬ ಅಧ್ಯಾಪಕನು ಶ್ರೇಷ್ಠತೆಯ ಹಾದಿಯಲ್ಲಿ ಮನ್ನಡೆಯಲು ಆ ಬಗೆಗೆ ನಮ್ಮನ್ನು ನಾವು ಜಾಗೃತಾವಸ್ಥೆಯಲ್ಲಿಟ್ಟುಕೊಳ್ಳಲು ತರಬೇತಿ ಕಾರ್ಯಾಗಾರಗಳು ಸಹಾಯ ಮಾಡುತ್ತವೆ. ಬೋಧಿಸಿದ ವಿಚಾರಗಳು ವಿದ್ಯಾರ್ಥಿಗಳ ದೈನಂದಿನ ಬದುಕಿನಲ್ಲಿ ಉಪಯೋಗವಾಗುವಂತಾಗಬೇಕು. ಸಮಾಜದ ಮತ್ತು ದೇಶದ ಅಭಿವೃದ್ಧಿಗಾಗಿ ತಂತ್ರಜ್ಞಾನವನ್ನು ಹೆಚ್ಚು ಬಳಸುತ್ತಾ ಶಿಕ್ಷಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಸಿ ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮಥ್ರ್ಯವನ್ನು ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣಕನ್ನಡ ಜಿಲ್ಲಾ ಪ್ರಭಾರ ಉಪನಿರ್ದೇಶಕ ವಾಸುದೇವ ಕಾಮತ್ ಮಾತನಾಡಿ ತರಬೇತಿಯಲ್ಲಿ ದೊರೆತ ಮಾಹಿತಿಗಳನ್ನು ಪ್ರತಿಯೊಬ್ಬ ಅಧ್ಯಾಪಕನೂ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳ ಸಾಮಥ್ರ್ಯವನ್ನೂ ಹೆಚ್ಚಿಸಿ ಈ ಮೂಲಕ ಶೇಕಡಾ ನೂರು ಫಲಿತಾಂಶವನ್ನು ತಮ್ಮ ಕಾಲೇಜುಗಳಲ್ಲಿ ಗಳಿಸುವಂತೆ ಪ್ರಯತ್ನಿಸಬೇಕು ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ. ಪಿ ಮಾತನಾಡಿ ತರಬೇತಿ ಕಾರ್ಯಕ್ರಮಗಳಿಂದ ದೊರೆತ ಮಾಹಿತಿಯನ್ನು ಕಲೆಹಾಕಿ ಪ್ರತಿಯೊಬ್ಬ ಅಧ್ಯಾಪಕನೂ ತಮ್ಮಲ್ಲಿ ಹೊಸತನವನ್ನು ಮೈಗೂಡಿಸಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ ಮಂಜುನಾಥ್ ಉಪಸ್ಥಿತರಿದ್ದರು. ಉಪನ್ಯಾಸಕ ದೇವಿಚರಣ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಆನಂದ ಪಿ ಸ್ವಾಗತಿಸಿ ಉಪನ್ಯಾಸಕಿ ದಿವ್ಯಾ ರಾವ್ ವಂದಿಸಿದರು.