ಸವಾರನಿಗೆ ಪೊಲೀಸರ ಭರ್ಜರಿ ದಂಡ: ಆಟೋ ಚಾಲಕಗೆ 32500 ರೂ., ಸ್ಕೂಟರ್ ಸವಾರನಿಗೆ 24000 ರೂ. ದಂಡ – ಕಹಳೆ ನ್ಯೂಸ್
ನವದೆಹಲಿ: ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಿಂದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಹೊಸ ಮೋಟಾರು ವಾಹನ ಕಾಯ್ದೆಯು, ಜಾರಿಗೆ ಬಂದ ವಾರದೊಳಗೆ ವಾಹನ ಸವಾರರನ್ನು ಸುಸ್ತು ಮಾಡಿದೆ. ಕಾರಣ ಹಲವೆಡೆ ಪೊಲೀಸರು ಹಾಕಿದ ದಂಡದ ಪ್ರಮಾಣವು, ಪ್ರಯಾಣಿಕ ಸವಾರಿ ಮಾಡುತ್ತಿರುವ ವಾಹನಕ್ಕಿಂತಲೂ ದುಬಾರಿಯಾಗಿದೆ.
ದೆಹಲಿಗೆ ಹೊಂದಿಕೊಂಡಿರುವ ಗುರುಗ್ರಾಮದಲ್ಲಿ ಮದನ್ ಎಂಬ ಹೊಂಡಾ ಸ್ಕೂಟರ್ ಸವಾರನಿಗೆ ಪೊಲೀಸರು ಭರ್ಜರಿ 23000 ರು. ದಂಡ ಹಾಕಿದ್ದಾರೆ. ಕಾರ್ಯನಿಮಿತ್ತ ದೆಹಲಿಯಿಂದ ಗುರುಗ್ರಾಮಕ್ಕೆ ಬಂದು, ಮರಳುವ ವೇಳೆ ಅಡ್ಡಗಟ್ಟಿದ ಪೊಲೀಸರು ವಿವಿಧ ದಾಖಲೆಗಳನ್ನು ಕೇಳಿದ್ದರು. ಆದರೆ ಮದನ್ ಬಳಿ ಡಿಎಲ್, ಆರ್‌ಸಿ, ವಿಮಾ, ಮಾಲಿನ್ಯ ಪ್ರಮಾಣ ಪತ್ರ ಸೇರಿದಂತೆ ಯಾವುದೇ ದಾಖಲೆ ಇರಲಿಲ್ಲ. ಜೊತೆಗೆ ಹೆಲ್ಮೆಟ್ ಕೂಡಾ ಧರಿಸಿದ ಕಾರಣಕ್ಕೆ ಆತನಿಗೆ ಪೊಲೀಸರು 23000 ರು. ದಂಡ ವಿಧಿಸಿದ್ದಾರೆ.
ವಿಚಿತ್ರವೆಂದರೆ ಮದನ್ ಓಡಿಸುತ್ತಿದ್ದ ಸ್ಕೂಟರ್ ಮೌಲ್ಯವೇ 15000 ರು.ಗಿಂತ ಹೆಚ್ಚಿಲ್ಲ. ಗುರುಗ್ರಾಮದಲ್ಲೇ ಅಮಿತ್ ಎಂಬ ಇನ್ನೊಬ್ಬ ಸ್ಕೂಟರ್ ಸವಾರನಿಗೂ ಇದೇ ರೀತಿ 24000 ರು. ದಂಡ ವಿಧಿಸಲಾಗಿದೆ. ಇನ್ನು ಗುರುಗ್ರಾಮದಲ್ಲಿ ಟ್ರಾಕ್ಟರ್ ಚಾಲಕನೊಬ್ಬನಿಗೆ 59000 ರು. ದಂಡ ವಿಧಿಸಲಾಗಿದೆ.
ಇನ್ನು ಗುರುಗ್ರಾಮದಲ್ಲೇ ಆಟೋ ಚಾಲಕಗೆ ಸಂಚಾರಿ ಪೊಲೀಸರು ಬರೋಬ್ಬರಿ 32500 ರು. ದಂಡ ವಿಧಿಸಿದ್ದಾರೆ. ಆಟೋ ಚಾಲಕನ ಬಳಿ ನೋಂದಣಿ ಪ್ರಮಾಣಪತ್ರ (ಆರ್‌ಸಿ), ಚಾಲನಾ ಪರವಾನಗಿ (ಡಿಎಲ್), ಮಾಲಿನ್ಯ ಪ್ರಮಾಣಪತ್ರ, ವಿಮಾ ಪತ್ರ ಇರಲಿಲ್ಲ. ಹೊಸ ಕಾಯ್ದೆಯಡಿ ಈ ಎಲ್ಲಾ ಅಪರಾಧಗಳಿಗೆ ಭರ್ಜರಿ ದಂಡ ವಿಧಿಸಬಹುದಾಗಿದೆ.
ಮತ್ತೊಂದೆಡೆ ಒಡಿಶಾದ ಭುವನೇಶ್ವರದಲ್ಲಿ ಆಟೋ ಚಾಲಕನೊಬ್ಬನಿಗೆ ಆರ್‌ಟಿಒ ಅಧಿಕಾರಿಗಳು ಭರ್ಜರಿ 47500 ರು. ದಂಡ ವಿಧಿಸಿದ್ದಾರೆ. ಪರ್ಮಿಟ್, ಲೈಸೆನ್ಸ್, ಆರ್‌ಸಿ, ಸೇರಿದಂತೆ ವಿವಿಧ ನಿಯಮ ಉಲ್ಲಂಘಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ.