ಕತಾರ್: ಕತಾರ್ ಆತಿಥ್ಯದಲ್ಲಿ 2022ರಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಕೂಟದ ಲಾಂಛನವನ್ನು ಮಂಗಳವಾರ ರಾತ್ರಿ ಅನಾವರಣಗೊಳಿಸಲಾಯಿತು. ಇಲ್ಲಿ ಲಾಂಛನದ ಬೃಹತ್ ಪ್ರತಿಕೃತಿಯನ್ನು ಸಾರ್ವಜನಿಕ ವೀಕ್ಷಣೆಗಾಗಿ ಇಡಲಾಗಿದೆ. ಅಂತೆಯೇ ಜಗತ್ತಿನ ಇನ್ನೂ ಕೆಲವು ನಗರಗಳಲ್ಲಿ ಲಾಂಛನವನ್ನು ಪ್ರದರ್ಶಿಸಲಾಗಿದೆ.
ಹೀಗಿದೆ ಲಾಂಛನ –
ಅರೇಬಿಯದಲ್ಲಿ ಸ್ತ್ರೀ ಪುರುಷರೆಲ್ಲರೂ ಬಳಸುವ ಜನಪ್ರಿಯ ಬಿಳಿ ಶಾಲನ್ನು ಎಂಟರ ಆಕಾರದಲ್ಲಿ (8) ಮಡಚಿ, ಅದರಲ್ಲಿ ಕುಂಕುಮ ಬಣ್ಣದಲ್ಲಿ ಚಿತ್ತಾರ ಬಿಡಿಸಲಾಗಿದೆ. ಮೇಲ್ಭಾಗದಲ್ಲಿ ಹೃದಯದ ಆಕಾರವನ್ನು ರೂಪಿಸಲಾಗಿದೆ. ಕೆಳಗೆ ಇಂಗ್ಲಿಷ್‍ನಲ್ಲಿ ಫಿಫಾ ವಲ್ಡ್ರ್ ಕಪ್ ಕತಾರ್ 2022 ಎಂದು ಬರೆಯಲಾಗಿದೆ. ‘ಎಂಟು’ ಎಂಬುದು ಅನಂತದ ಸಂಕೇತವಾದ್ದರಿಂದ ಈ ಸಂಖ್ಯೆಯನ್ನು ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ.
ಕತಾರ್‍ನ ಶೆರಿಬ್ ಜಿಲ್ಲೆಯಲ್ಲಿರುವ ನ್ಯಾಶನಲ್ ಆರ್ಕಿವ್ಸ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಲಾಂಛನ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಅಶ್ವದಳದ ಆಕರ್ಷಕ ಮೆರವಣಿಗೆ ನಡೆಯಿತು. ಅನಾವರಣಕ್ಕೆ ಸ್ಥಳೀಯ ಸಮಯ 20:22ನ್ನು ಆರಿಸಿಕೊಳ್ಳಲಾಗಿತ್ತು. ಇದು ವಿಶ್ವಕಪ್ ನಡೆಯುವ ವರ್ಷವನ್ನು ಪ್ರತಿನಿಧಿಸುತ್ತದೆ. ಮ್ಯಾಡ್ರಿಡ್, ಬ್ಯೂನಸ್ ಐರಿಸ್ ಮತ್ತು ಬೇರೂತ್‍ನಲ್ಲೂ ಲಾಂಛನವನ್ನು ಪ್ರದರ್ಶಿಸಲಾಗಿದೆ.