ದೂದ್ ಸಾಗರದ ವೈಭವವನ್ನು ಕಣ್ತುಂಬಿಕೊಳ್ಳಲು ರೈಲ್ವೇ ಪ್ರಯಾಣಿಕರಿಗೆ ಅವಕಾಶ; 10 ನಿಮಿಷ ದೂದ್ ಸಾಗರ್ ನಲ್ಲಿ ನಿಲ್ಲಲಿದೆ ರೈಲು – ಕಹಳೆ ನ್ಯೂಸ್|
ಪಣಜಿ : ಗೋವಾ ಹಾಗೂ ಕರ್ನಾಟಕದ ಗಡಿಯಲ್ಲಿ ಇರುವ ಮನಮೋಹಕ ದೂದ್‍ಸಾಗರ್ ಜಲಪಾತ ವೀಕ್ಷಣೆಗೆ ಪ್ರವಾಸಿಗರು ದಟ್ಟವಾದ ಕಾಡಿನೊಳಗೆ ಚಾರಣ ಕೈಗೊಳ್ಳಬೇಕಾಗಿಲ್ಲ. ರೈಲಿನಲ್ಲಿ ಹೋಗುವಾಗಲೂ ಜಲಪಾತವನ್ನು ವೀಕ್ಷಿಸಬಹುದು. ದೂದ್‍ಸಾಗರ್ ಬಳಿ ರೈಲುಗಳು 10 ನಿಮಿಷ ನಿಲ್ಲಲಿದ್ದು, ಪ್ರಯಾಣಿಕರು ರೈಲಿನಿಂದ ಇಳಿದು ಜಲಪಾತವನ್ನು ಆನಂದಿಸಬಹುದಾಗಿದೆ.
ರೈಲ್ವೆ ಖಾತೆ ರಾಜ್ಯ ಸಚಿವ ಹಾಗೂ ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಮತ್ತು ಸಚಿವ ಸುರೇಶ್ ಅಂಗಡಿ ಅವರು ವಾರದಲ್ಲಿ ಎರಡು ಬಾರಿ ಸಂಚರಿಸುವ ವಾಸ್ಕೋ- ಬೆಳಗಾವಿ ರೈಲಿಗೆ ಬುಧವಾರ ಚಾಲನೆ ನೀಡಿದರು. ಈ ರೈಲು ದೂದ್ ಸಾಗರ್ ಜಲಪಾತದ ಬಳಿ 10 ನಿಮಿಷ ನಿಲ್ಲಲಿದೆ.
ಮಾಂಡೋವಿ ನದಿಯಲ್ಲಿರುವ ದೂದ್‍ಸಾಗರ್ ಜಲಪಾತ ದೇಶದ ಅತಿದೊಡ್ಡ ಜಲಪಾತಗಳ ಪೈಕಿ ಒಂದೆನಿಸಿದೆ. ಮಡಗಾಂವ್- ಬೆಳಗಾವಿ ರೈಲ್ವೆ ಮಾರ್ಗದ ಮಧ್ಯೆ ಈ ಜಲಪಾತ ಸಿಗುತ್ತದೆ. ಇಷ್ಟುದಿನ ಈ ಮಾರ್ಗದ ಮೂಲಕ ಸಂಚರಿಸುತ್ತಿದ್ದ ರೈಲುಗಳು ದೂದ್ ಸಾಗರ ಜಲಪಾತದ ಮೂಲಕವೇ ಹಾದು ಹೋದರೂ ಪ್ರಯಾಣಿಕರಿಗೆ ಜಲಪಾತವನ್ನು ವೀಕ್ಷಿಸುವ ಅವಕಾಶ ಸಿಗುತ್ತಿರಲಿಲ್ಲ. ಈ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಮೊಲೆಮ್ ಗ್ರಾಮದಲ್ಲಿ ಇಳಿದು ಅರಣ್ಯದ ಮಾರ್ಗದಲ್ಲಿ ಚಾರಣ ಕೈಗೊಳ್ಳಬೇಕಿತ್ತು. ಮುಂದಿನ ದಿನಗಳಲ್ಲಿ ರೈಲು ನಿಲುಗಡೆ ಸೇವೆಯನ್ನು ಇನ್ನಷ್ಟು ರೈಲುಗಳಿಗೆ ವಿಸ್ತರಿಸುವ ಸಾಧ್ಯತೆಯೂ ಇದೆ.