Sunday, November 24, 2024
ಸುದ್ದಿ

ಬಂಟ್ರ ಮರ್ದಾಳ ಹಿ.ಪ್ರಾ. ಶಾಲಾ ಶಿಕ್ಷಕ ರಾಮಕೃಷ್ಣ ಮಲ್ಲಾರರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ – ಕಹಳೆ ನ್ಯೂಸ್

ಕಡಬ: ಬಂಟ್ರ ಮರ್ದಾಳ ಹಿ.ಪ್ರಾ.ಶಾಲೆಯ ಸಹಶಿಕ್ಷಕ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 25 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿರುವ ರಾಮಕೃಷ್ಣ ಮಲ್ಲಾರ ಅವರು, ಓರ್ವ ಉತ್ತಮ ನಾಯಕತ್ವ ಗುಣವನ್ನು ಹೊಂದಿದ್ದು, ಇದರಿಂದ ಸಮಾಜದಿಂದ ಸಂಪನ್ಮೂಲ ಕ್ರೂಡೀಕರಿಸಿ ಶಾಲೆಯ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರ ವಹಿಸಿದವರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರೋಟರಿ ಸಂಸ್ಥೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಶಿಕ್ಷಕ ವೃತ್ತಿಯ ಜತೆಗೆ ದುಡಿದು ಅದರ ಪ್ರಯೋಜನವನ್ನು ಶಾಲೆಯ ಅಭಿವೃದ್ದಿಗೆ ವಿನಿಯೋಗಿಸಿದ್ದಾರೆ. ಆದುದರಿಂದಲೇ ಸಹಜವಾಗಿ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಿಚಯ
ಸುಳ್ಯ ತಾಲೂಕು ಏನೆಕಲ್ಲು ಗ್ರಾಮದ ಮಲ್ಲಾರ ರುಕ್ಮಯ್ಯ ಗೌಡ ಚೆನ್ನಮ್ಮ ದಂಪತಿಯ ಪುತ್ರರಾಗಿರುವ ರಾಮಕೃಷ್ಣ ಅವರು ತನ್ನ ಪ್ರಾಥಮಿಕ ಹಾಗೂ ಪೌಢ ಶಿಕ್ಷಣವನ್ನು ಏನೆಕಲ್ಲು ಸರಕಾರಿ ಶಾಲೆಯಲ್ಲಿ ಪೂರೈಸಿದ್ದಾರೆ, ಕಾಲೇಜು ಶಿಕ್ಷಣವನ್ನು ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯದಲ್ಲಿ ನಡೆಸಿ ಡಯಾಟ್(ಟಿ.ಟಿ.ಐ)ಯನ್ನು ಮಂಗಳೂರಿನಲ್ಲಿ ನಡೆಸಿ 1994ರಲ್ಲಿ ರೆಂಜಿಲಾಡಿ ಗ್ರಾಮದ ಮೀನಾಡಿ ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದಾರೆ. ಬಳಿಕ 1999ರಲ್ಲಿ ಬಂಟ್ರ ಮರ್ದಾಳ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡ ರಾಮಕೃಷ್ಣರವರು ಸ್ಥಳೀಯ ಶಾಲೆಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ 5 ವರ್ಷ ಬಂಟ್ರ ಕ್ಲಸ್ಟರ್ನ್ ಸಿ.ಆರ್.ಪಿ. ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ ಬಂಟ್ರ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಾ ಶಾಲೆಯ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಂಘ ಸಂಸ್ಥೆಯಲ್ಲಿ ಜವಾಬ್ದಾರಿ ನಿರ್ವಹಣೆ
2009ರಿಂದ 2014ರವರೆಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾಗಿ ಯಶಸ್ವಿ ಕಾರ್ಯ ನಿರ್ವಹಿಸಿದ ರಾಮಕೃಷ್ಣ ಮಲ್ಲಾರ ಅವರು ಅಧ್ಯಕ್ಷತೆಯ ಅವಧಿಯಲ್ಲಿ ಅಂದರೆ 2013ರಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು ಇಂದಿನವರೆಗೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಲವಾರು ಬಾರಿ ಶಿಕ್ಷಕರುಗಳ ಸಮಸ್ಯೆಗಳಿಗೆ ಸ್ಪಂಧಿಸಿ ಅದನ್ನು ಅಧಿಕಾರಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. 2013ರಲ್ಲಿ ಕಡಬದಲ್ಲಿ ಟೀಚರ್ಸ್ ಕೋ ಆಪರೇಟಿವ್ ಸೊಸೈಟಿಯನ್ನು ಸ್ಥಾಪನೆ ಮಾಡಿ ಅದರ ಸ್ಥಾಪಕಾಧ್ಯಕ್ಷರಾಗಿ ಮುಂದುವರಿದ್ದಾರೆ, 2003ರಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಗೆ ಸೇರಿ ಅದರಲ್ಲಿ ಅಧ್ಯಕ್ಷರಾಗಿ ಅಲ್ಲದೆ ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಮೂಡಬಿದಿರೆ ತಾಲೂಕುಗಳನ್ನೊಳಗೊಂಡ ವಲಯಕ್ಕೆ ರೋಟರಿ ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕಗೊಂಡು “ಬೆಸ್ಟ್ ಅಸಿಸ್ಟೆಂಟ್ ಗವರ್ನರ್” ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅಲ್ಲದೆ ಮರ್ಧಾಳ ವಿವೇಕಾನಂದ ಯುವಕ ಮಂಡಲ, ಹಲವು ರೋಟರಿ ಕಾರ್ಯಕ್ರಮಗಳಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಗಿದೆ.

ಶಾಲೆಯ ಅಭಿವೃದ್ದಿ:
ಶಿಕ್ಷಕ ವೃತ್ತಿಯ ಜತೆಗೆ ಸಂಘ ಸಂಸ್ಥೆಗಳ ಜವಾಬ್ದಾರಿ ವಹಿಸಿಕೊಂಡು ಅದರಲ್ಲಿ ದುಡಿದಿರುವುದರಿಂದ ಇವರು ಉತ್ತಮ ನಾಯಕತ್ವ ಗುಣವನ್ನು ಬೆಳೆಸಿಕೊಂಡಿದ್ದರು, ಅಂತರಾಷ್ಟ್ರಿಯ ರೋಟರಿ ಸಂಸ್ಥೆಯ ಸಹಾಯ, ಜನಪ್ರತಿನಿಧಿಗಳು, ಊರ ದಾನಿಗಳ ಸಹಾಯದಿಂದ ಬಂಟ್ರ ಶಾಲೆಗೆ ಇಂಟರ್ ಲಾಕ್ ಅಳವಡಿಸಿರುವುದು, ಕಂಪ್ಯೂಟರ್, ವಿದ್ಯುನ್ಮಾನ ಕಲಿಕಾ ಘಟಕ, ಶುದ್ಧ ಕುಡಿಯುವ ನೀರಿನ ಘಟಕ, ಮಳೆ ಕೊಯ್ಲು, ಶಾಲಾ ಆವರಣ ಗೋಡೆ, ಧ್ವನಿವರ್ಧಕ, ಶಾಲೆಗೆ ಸುಂದರವಾದ ಪ್ರವೇಶದ್ವಾರ(ವರ್ಲಿ) ನಿರ್ಮಿಸಿರುವುದು ಅಲ್ಲದೆ ತೀರ ನಾದುರಸ್ತಿಯಲ್ಲಿ ಶಾಲೆಯನ್ನು ದುರಸ್ತಿ ಮಾಡುವಲ್ಲಿ ಇವರು ಶ್ರಮವಹಿಸಿರುವುದು ಕಂಡು ಬರುತ್ತದೆ. ಓರ್ವ ಉತ್ತಮ ವಾಲಿಬಾಲ್ ಆಟಗಾರರಾಗಿಯೂ ಉತ್ತಮ ವಾಗ್ಮಿಯೂ ಆಗಿದ್ದಾರೆ.

ಸುಖ ಸಂಸಾರ
ಇವರ ಪತ್ನಿ ವನಿತಾ ಅವರು ಬಿಳಿನೆಲೆ ಕೈಕಂಬ ಶಾಲೆಯ ಶಿಕ್ಷಕಿಯಾಗಿದ್ದಾರೆ, ಪುತ್ರ ಮನ್ವೀತ್ ವಿವೇಕಾನಂದ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಓದುತ್ತಿದ್ದರೆ, ಪುತ್ರ ಲವಿತ್ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಪ್ರಶಸ್ತಿ ಬಂದಿರುವ ಬಗ್ಗೆ ಕಹಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ, ಇದರ ಕೀರ್ತಿ ನನಗೆ ಪ್ರೋತ್ಸಾಹಿಸಿ ನನ್ನೊಂದಿಗೆ ಸಹಕಾರ ನೀಡಿದ ಶಾಲಾ ಶಿಕ್ಷಕರು, ಸಂಘ ಸಂಸ್ಥೆಯವರು, ಮಕ್ಕಳ ಪೋಷಕರು, ಊರಿನವರಿಗೆ ಸಲ್ಲುತ್ತದೆ ಎಂದು ಹೇಳಿದ ಅವರು ರೋಟರಿ ಸಂಸ್ಥೆಯಿಂದಾಗಿ ನನಗೆ ತುಂಬಾ ಅನುಭವ ಸಿಕ್ಕಿದಂತಾಗಿದೆ. ಅಲ್ಲದೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯಾಗಿ ನಾನು ಅಧಿಕಾರಿಗಳು ಮತ್ತು ಶಿಕ್ಷಕರ ಜತೆ ಬಹಳ ತಾಳ್ಮೆಯಿಂದ ವ್ಯವಹರಿಸಿ ಹಲವಾರು ಕೆಲಸ ಕಾರ್ಯಗಳನ್ನು ಮಾಡುವಂತಾಗಿದೆ. ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ, ಈ ಮೂಲಕ ಶಾಲೆಯ, ಶಿಕ್ಷಕರ, ಸಮಾಜದ ಅಭಿವೃದ್ದಿಗೆ ನನ್ನನ್ನು ತೊಡಗಿಸಿಕೊಳ್ಳುತ್ತೇನೆ, ಅಲ್ಲದೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಲು ಪ್ರಯತ್ನಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.