ಜನನ : 5 ನೇ ಸೆಪ್ಟೆಂಬರ್, 1888
ಊರು: ತಮಿಳುನಾಡಿನ ‘ತಿರುತ್ತಣಿ’
ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ.
1952 ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ ‘ರಾಧಾಕೃಷ್ಣನ್’, ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. ‘ರಾಧಾಕೃಷ್ಣನ್’ ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ 1954 ರಲ್ಲಿ ಪ್ರತಿಷ್ಠಿತ ‘ಭಾರತ ರತ್ನ ಪ್ರಶಸ್ತಿ’ ನೀಡಿ ಗೌರವಿಸಿತು.
ಆಗ ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು.
ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ ‘ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್’ ಪುಸ್ತಕ ಬಿಡುಗಡೆಗೊಂಡಿತು. ‘ಡಾ. ರಾಜೇಂದ್ರ ಪ್ರಸಾದ್’ ನಂತರ, 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ ‘ಡಾ.ರಾಧಾ ಕೃಷ್ಣನ್’ ಅವರಿಗೆ ಸಲ್ಲುತ್ತದೆ.
ಭಾರತದ ಎರಡನೇ ರಾಷ್ಟ್ರಪತಿಯಾಗಿ
ರಾಧಾಕೃಷ್ಣನ್ ಅವರು ಬಾರತದ ಎರಡನೆಯ ರಾಷ್ಟ್ರಪತಿಯಾಗಿ 1962 ರಿಂದ 1967 ರವರೆಗೆ ಅಮೂಲ್ಯವಾದ ಸೇವೆಸಲ್ಲಿಸಿದರಲ್ಲದೆ ಭಾರತದ ಸಂಸ್ಕೃತಿಯ ಹೆಗ್ಗಳಿಕೆಯನ್ನು ವಿದೇಶಗಳಲ್ಲಿ ಪಸರಿಸಿದರು.
ಶಿಕ್ಷಕರ ದಿನಾಚರಣೆ
ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಶಿಕ್ಷಕರಾಗಿದ್ದ ‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್’ 1962 ರಲ್ಲಿ ಭಾರತದ ರಾಷ್ಟ್ರಪತಿಯಾದಾಗ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ “ಸೆಪ್ಟೆಂಬರ್ 5 “ನ್ನು ‘ಶಿಕ್ಷಕರ ದಿನ’ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ(1962) ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಸೇವೆಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ.
ವಿಶ್ವದ ಎಲ್ಲ ದೇಶಗಳಲ್ಲಿ ಶಿಕ್ಷಕರ ದಿನವನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾಗುತ್ತಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5 ರಂದು “ವಿಶ್ವ ಶಿಕ್ಷಕರ ದಿನ” ವನ್ನು ಆಚರಿಸಬೇಕೆಂದು “ಯುನೆಸ್ಕೋ ” ಕರೆ ನೀಡಿದೆ. 1966 ರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ರ ಅಕ್ಟೋಬರ್ 5 ರಿಂದ “ವಿಶ್ವ ಶಿಕ್ಷಕರ ದಿನ”ವನ್ನಾಚರಿಸಲಾಗುತ್ತದೆ.