ಪುತ್ತೂರು: ವರ್ಲಿ ಆರ್ಟ್ ಅನ್ನುವುದು ಬುಡಕಟ್ಟು ಜನಾಂಗದವರು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಬಂದಿರುವ ನಾನಾ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿಬಿಂಬಿಸುವ ಒಂದು ವಿಶಿಷ್ಟ ಕಲೆ ಎಂದು ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಾರಿಜ ಎಮ್ ಹೇಳಿದರು.
ಕಾಲೇಜಿನ ಲಲಿತ ಕಲೆಗಳ ಸಂಘ ಮತ್ತು ರಂಗ ಕಲೆಗಳ ಸಂಘದ ಆಶ್ರಯದಲ್ಲಿ ಆಗಸ್ಟ್ 31ರಂದು ಸ್ಪಂದನ ಸಭಾಭವನದಲ್ಲಿ ಕ್ರಾಫ್ಟ್ ಮತ್ತು ವರ್ಲಿ ಆರ್ಟ್ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. ವರ್ಲಿ ಆರ್ಟ್ ಅನ್ನುವ ಈ ಕಲಾ ಪ್ರಕಾರವು ಮಹಾರಾಷ್ಟ್ರದಲ್ಲಿ 1970ರ ದಶಕದಲ್ಲಿ ವ್ಯವಸ್ಥಿತವಾಗಿ ಆರಂಭಗೊಂಡಿತು. ಇದರಲ್ಲಿ ವೃತ್ತಾಕಾರ, ತ್ರಿಕೋನಕಾರ, ಚದರಾಕಾರ ಮುಂತಾದವುಗಳನ್ನು ಒಳಗೊಂಡಿದೆ. ವೃತ್ತಾಕಾರವು ಸೂರ್ಯ ಚಂದ್ರನನ್ನು ಬಿಂಬಿಸಿದರೆ, ತ್ರಿಕೋನಾಕೃತಿಯು ಪರ್ವತ ಗಿಡ ಮರಗಳನ್ನು ಸಂಕೇತಿಸುತ್ತದೆ. ಚದರಾಕೃತಿಯು ಮಾನವನ ಆವಿಷ್ಕಾರಗಳನ್ನು ಬಿಂಬಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಅರ್ಥಗರ್ಭಿತವಾದ ಚಿತ್ರ ರಚನೆಯಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಬದುಕಿಗೆ ಅಗತ್ಯವಿರುವ ಏಕಾಗ್ರತೆ ಮತ್ತು ನೆಮ್ಮದಿ ಸಿಗುತ್ತದೆ.
ಕಾಲೇಜಿನ ರಂಗ ಕಲೆಗಳ ಸಂಘದ ಸಂಯೋಜಕ ಪ್ರಶಾಂತ್ ರೈ ಮಾತನಾಡಿ, ಕಲೆ ಅನ್ನುವುದು ಮನುಷ್ಯನ ಜೀವನದ ಅವಿಭಾಜ್ಯ ಅಂಗ. ನಾವು ವಿವಿಧ ಕಲಾ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ಸಂತೃಪ್ತಿ ದೊರೆಯುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗನುಗುಣವಾಗಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಇಂಟೀರಿಯರ್ ಡಿಸೈನರ್ ಚಂದನಾ ಗೌಡ ಸುಳ್ಯ ಮಾತನಾಡಿ, ಚಿತ್ರಕಲೆಯು ಮಾನವನ ನಾನಾ ರೀತಿಯ ಹವ್ಯಾಸಗಳಲ್ಲಿ ಪ್ರಮುಖವಾದುದು. ಇಂತಹ ಹವ್ಯಾಸದಲ್ಲಿ ಭಾಗಿಯಾಗುವುದರಿಂದ ಮನಸ್ಸಿನ ಏಕಾಗ್ರತೆಯು ಹೆಚ್ಚುತ್ತದೆ. ಕಲೆಯನ್ನು ಕರಗತ ಮಾಡಿಕೊಳ್ಳಲು ವಿಶೇಷ ಆಸಕ್ತಿ ಹೊಂದಿರಬೇಕು ಎಂದು ಹೇಳಿದರು. ಬಳಿಕ ಅವರು ನಾನಾ ರೀತಿಯ ಚಿತ್ರಕಲೆಗಳಿಗೆ ಅಗತ್ಯವಿರುವ ಮೂಲ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು, ತರಬೇತಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಲಲಿತ ಕಲೆಗಳ ಸಂಘದ ಸಂಯೋಜಕಿ ರಕ್ಷಿತಾ ಆರ್ ಬಿ, ಸಹ ಸಂಯೋಜಕಿಯರಾದ ದೀಪಿಕಾ ಸನಿಲ್ ಮತ್ತು ಸೌಮ್ಯ ಉಪಸ್ಥಿತರಿದ್ದರು.
ಶ್ರದ್ಧಾ ಮತ್ತು ತಂಡದವರು ಪ್ರಾರ್ಥಿಸಿದರು. ಚೆನ್ನಬಸಮ್ಮ ಸ್ವಾಗತಿಸಿದರು. ಪ್ರತಿಕ್ಷಾ ವಂದಿಸಿದರು. ಅವನಿ ಎಸ್ ಕಾರ್ಯಕ್ರಮ ನಿರೂಪಿಸಿದರು.