ಪುತ್ತೂರು: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಆಶ್ರಯದಲ್ಲಿ ಪುತ್ತೂರಿನ ಶಿವರಾಮ ಕಾರಂತ ಬಾಲವನ ಈಜು ಕೊಳದಲ್ಲಿ ಜರಗಿದ ಮಂಗಳೂರು ವಿವಿ ಮಟ್ಟದ ಪುರುಷರ ಹಾಗೂ ಮಹಿಳೆಯರ ಈಜು ಸ್ಪರ್ಧೆಯ ಎರಡೂ ವಿಭಾಗದಲ್ಲಿ ಸಂತ ಫಿಲೋಮಿನಾ ಕಾಲೇಜಿಗೆ ರನ್ನರ್ಸ್ ಅಪ್ ಪ್ರಶಸ್ತಿ ಲಭಿಸಿದೆ.
ಪುರುಷರ ವೈಯಕ್ತಿಕ ವಿಭಾಗದಲ್ಲಿ ಫಿಲೋಮಿನಾ ಕಾಲೇಜಿನ ರಾಯ್‍ಸ್ಟನ್ ರೋಡ್ರಿಗಸ್ ಇವರು 13 ಚಿನ್ನ, 2 ಬೆಳ್ಳಿ ಪದಕ ಪಡೆದರು. ಪುರುಷರ ವಿಭಾಗದಲ್ಲಿ ಒಟ್ಟು 15 ಪದಕಗಳೊಂದಿಗೆ 114 ಅಂಕಗಳನ್ನು ಪಡೆದ ರಾಯ್‍ಸ್ಟನ್ ಪುರುಷರ ವಿಭಾಗದ ‘ವೈಯಕ್ತಿಕ ಚಾಂಪಿಯನ್’ ಆಗಿ ಮೂಡಿ ಬಂದರು. ಪುರುಷರ ವಿಭಾಗದಲ್ಲಿ ಒಟ್ಟಾರೆಯಾಗಿ 128 ಅಂಕಗಳನ್ನು ಪಡೆದ ಸಂತ ಫಿಲೋಮಿನಾ ಕಾಲೇಜು ತಂಡವು ‘ರನ್ನರ್ಸ್ ಅಪ್’ ಪ್ರಶಸ್ತಿ ಪಡೆಯಿತು.
ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಫಿಲೋಮಿನಾದ ಸಿಂಚನಾ ಡಿ ಗೌಡ ಇವರು 5 ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಪಡೆದು ಮಹಿಳಾ ವಿಬಾಗದ ‘ವೈಯಕ್ತಿಕ ಚಾಂಪಿಯನ್’ ಆಗಿ ಮೂಡಿ ಬಂದರು. ಮಹಿಳೆಯರ ವಿಭಾಗದಲ್ಲಿ 4X100 ಮೀ. ಫ್ರೀ ಸ್ಟೈಲ್ ಹಾಗೂ 4X200 ಮೀ. ಫ್ರೀ ಸ್ಟೈಲ್ ರಿಲೇಗಳೆರಡರಲ್ಲೂ ಫಿಲೋಮಿನಾ ಕಾಲೇಜಿಗೆ ಚಿನ್ನ ದೊರಕಿತು. ಬಿಂದಿಯಾ, ವೈಷ್ಣವಿ, ಲಹರಿ ಹಾಗೂ ಸಿಂಚನಾ ರಿಲೇ ತಂಡದ ಸದಸ್ಯರು. ಮಹಿಳಾ ವಿಭಾಗದಲ್ಲಿ ಒಟ್ಟು 107 ಅಂಕಗಳನ್ನು ಪಡೆದ ಸಂತ ಫಿಲೋಮಿನಾ ಕಾಲೇಜು ತಂಡ ‘ರನ್ನರ್ಸ್ ಅಪ್’ ಪ್ರಶಸ್ತಿ ಪಡೆಯಿತು.
ಒಟ್ಟು 38 ಚಿನ್ನದ ಪದಕಗಳಿಗಾಗಿ ನಡೆದ ಈ ಈಜು ಚಾಂಪಿಯನ್‍ಶಿಪ್‍ನಲ್ಲಿ ಫಿಲೋಮಿನಾ ಕಾಲೇಜಿಗೆ ಒಟ್ಟು 20 ಚಿನ್ನದ ಪದಕಗಳು ಲಭಿಸಿರುವುದು ವಿಶೇಷವಾಗಿದೆ. ಇದರೊಂದಿಗೆ ಒಟ್ಟಾರೆಯಾಗಿ ಕಾಲೇಜಿಗೆ 20 ಚಿನ್ನ, 7 ಬೆಳ್ಳಿ ಹಾಗೂ 2 ಕಂಚಿನ ಪದಕಗಳು ಲಭಿಸಿದವು.
ಪುತ್ತೂರು ಅಕ್ವೆಟಿಕ್ ಕ್ಲಬ್‍ನ ಸದಸ್ಯರಾಗಿರುವ ಕಾಲೇಜಿನ ಈಜು ತಂಡದ ಎಲ್ಲಾ ಸದಸ್ಯರೂ ಡಾ| ಶಿವರಾಮ ಕಾರಂತ ಬಾಲವನ ಈಜು ಕೊಳದಲ್ಲಿ ಪಾರ್ಥ ವಾರಣಾಸಿ, ವಸಂತ ಕುಮಾರ್, ನಿರೂಪ್ ಜಿ ಆರ್, ರೋಹಿತ್ ಪ್ರಕಾಶ್ ಮತ್ತು ಯಜ್ಞೇಶ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.