ಹೊಸದಿಲ್ಲಿ : ಪರಿಸರ ಸಂರಕ್ಷಣೆಗಾಗಿ ಜಾಗತಿಕ ಮಟ್ಟದಿಂದಲೇ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಕೆಲವು ಮಹತ್ವದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ. ವಿದ್ಯುನ್ಮಾನ ವಾಹನಗಳ ಬಳಕೆ ಒತ್ತು ನೀಡಲು ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧ ಮಾಡಲಾಗುವುದು ಎಂಬ ವದಂತಿಗಳಿಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ.
ಯಾವುದೇ ಕಾರಣಕ್ಕೂ ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆಯನ್ನು ನಿಷೇಧ ಮಾಡುವುದಿಲ್ಲ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದರು. ಇದರಿಂದ ಆಟೊಮೊಬೈಲ್ ಕ್ಷೇತ್ರಕ್ಕೆ ನೆಮ್ಮದಿ ಸಿಕ್ಕಂತಾಗಿದೆ.
ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳ ಬಳಕೆ ನಿಷೇಧ ಮಾಡುವುದು ಅಥವಾ ಉತ್ಪಾದನೆ ಸ್ಥಗಿತಗೊಳಿಸುವುದು ಅಥವಾ ಹಾಲಿ ಇರುವ ವಾಹನಗಳ ಓಡಾಟಕ್ಕೆ ತಡೆ ನೀಡುವಂಥ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ಸಚಿವರು ತಿಳಿಸಿದರು.
ಪರಿಸರ ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆಗಳನ್ನು, ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಸಂಪೂರ್ಣ ನಿಷೇಧ ಹೇರಲಾಗುವುದು ಎಂದಲ್ಲ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದರು.
ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧ ಮಾಡಲಾಗುತ್ತದೆ ಎಂಬ ಸುದ್ದಿ ಆಟೊಮೊಬೈಲ್ ಕ್ಷೇತ್ರದಲ್ಲಿ ಭಾರಿ ತಲ್ಲಣ ಸೃಷ್ಟಿ ಮಾಡಿತ್ತು. ಇದು ಆರ್ಥಿಕತೆಯ ಮೇಲೂ ಭಾರಿ ಪರಿಣಾಮ ಬೀರಿತ್ತು. ಆಟೊಮೊಬೈಲ್ ಕಂಪನಿಗಳ ಷೇರುಗಳು ಕೂಡ ಇಳಿಮುಖ ಕಂಡಿತ್ತು. ಈಗ ಕೇಂದ್ರ ಸರಕಾರದ ಸ್ಪಷ್ಟನೆಯಿಂದ ಆಟೊಮೊಬೈಲ್ ಕ್ಷೇತ್ರಕ್ಕೆ ನೆಮ್ಮದಿ ದೊರೆತಿದೆ.