ರಷ್ಯಾದ ಫಾರ್ ಈಸ್ಟ್ ಪ್ರಾಂತ್ಯದ ಅಭಿವೃದ್ಧಿಗೆ ಭಾರತದಿಂದ 1 ಬಿಲಿಯನ್ ಡಾಲರ್ ಸಾಲ: ನರೇಂದ್ರ ಮೋದಿ – ಕಹಳೆ ನ್ಯೂಸ್
ವ್ಲಾದಿವೋಸ್ಟಾಕ್ : ಭಾರತ ಮತ್ತು ರಷ್ಯಾ ನಡುವೆ ದ್ವಿಪಕ್ಷೀಯ ಬಾಂಧವ್ಯ ಅತ್ಯುತ್ತಮವಾಗಿದ್ದು ಉಭಯ ದೇಶಗಳು ರಷ್ಯಾದ ಫಾರ್ ಈಸ್ಟ್ ಪ್ರಾಂತ್ಯದ ಅಭಿವೃದ್ಧಿಗೆ ಜತೆಯಾಗಿ ಶ್ರಮಿಸಲಿವೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಸಂಪತ್ತು ಹೆಚ್ಚಾಗಿರುವ ಈ ಪ್ರಾಂತ್ಯದ ಅಭಿವೃದ್ಧಿಗೆ ಭಾರತ 1 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ನೀಡಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ರಷ್ಯಾ ಪ್ರವಾಸದಲ್ಲಿರುವ ನರೇಂದ್ರ ಮೋದಿ ರಷ್ಯಾದ ಪೂರ್ವ ಭಾಗದಲ್ಲಿರುವ ವ್ಲಾದಿವೋಸ್ಟಾಕ್ ನಗರದಲ್ಲಿ ಆಯೋಜಿಸಿರುವ 5ನೇ ಪೂರ್ವ ಆರ್ಥಿಕ ವೇದಿಕೆಯ ಶೃಂಗದಲ್ಲಿ ಮಾತನಾಡಿದರು. ಈ ವೇಳೆ ಮಾತನಾಡಿದ ಮೋದಿ, ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಉಭಯ ದೇಶಗಳ ರಾಜಧಾನಿಯಲ್ಲಿ ಸರ್ಕಾರಿ ಪ್ರತಿನಿಧಿಗಳ ಮಾತುಕತೆಗೆ ಮಾತ್ರ ಸೀಮಿತವಾಗಿಲ್ಲ. ಇದು ಉಭಯ ದೇಶಗಳ ಜನರ ಮತ್ತು ನಿಕಟ ವ್ಯಾಪಾರ ಸಂಬಂಧವಾಗಿದೆ. ಭಾರತ ಮತ್ತು ರಷ್ಯಾದ ಫಾರ್ ಈಸ್ಟ್ ಭಾಗದ ನಡುವಿನ ಸಂಬಂಧ ಬಹಳ ಹಳೆಯದು. ವ್ಲಾದಿವೋಸ್ಟಾಕ್‍ನಲ್ಲಿ ರಾಯಭಾರ ಕಚೇರಿ ತೆರೆದ ಮೊದಲ ರಾಷ್ಟ್ರ ಭಾರತ ಎಂದು ಮೋದಿ ತಿಳಿಸಿದರು.
ಫಾರ್ ಈಸ್ಟ್ ಪ್ರಾಂತ್ಯದ ಅಭಿವೃದ್ಧಿಗಾಗಿ ಭಾರತ 1 ಬಿಲಿಯನ್ ಡಾಲರ್ ಸಾಲ ನೀಡಲಿದೆ. ನಮ್ಮ ಸರ್ಕಾರ ಆಕ್ಟ್ ಈಸ್ಟ್ ನೀತಿಯ ಭಾಗವಾಗಿ ಪೂರ್ವ ಏಷ್ಯಾಗೆ ಹೆಚ್ಚಿನ ಗಮನ ನೀಡುತ್ತಿದೆ. ನನ್ನ ಇಂದಿನ ನಿರ್ಧಾರದಿಂದ ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಬಾಂಧವ್ಯ ಮತ್ತಷ್ಟು ವೃದ್ಧಿಸಲಿದೆ ಎಂದು ಭಾವಿಸುತ್ತೇನೆ. ರಷ್ಯಾದ ಫಾರ್ ಈಸ್ಟ್ ಪ್ರಾಂತ್ಯದ ಅಭಿವೃದ್ಧಿಗೆ ಇಲ್ಲಿ ನೆಲೆಸಿರುವ ಭಾರತೀಯರು ಕಾಣಿಕೆ ನೀಡುವ ವಿಶ್ವಾಸವಿದೆ ಎಂದು ಮೋದಿ ತಿಳಿಸಿದ್ದಾರೆ.
ಭಾರತೀಯ ಕಂಪನಿಗಳು ರಷ್ಯಾದ ತೈಲ ಮತ್ತು ಅನಿಲ ನಿಕ್ಷೇಪಗಳಲ್ಲಿ 7 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿವೆ. 2001ರಲ್ಲಿ ಒಎನ್‍ಜಿಸಿ ವಿದೇಶ್ ಫಾರ್ ಈಸ್ಟ್ ಪ್ರಾಂತ್ಯದಲ್ಲಿ ಸಾಖಲಿನ್-1 ತೈಲ ಮತ್ತು ಅನಿಲ ನಿಕ್ಷೇಪದಲ್ಲಿ ಶೇ. 20ರಷ್ಟು ಷೇರುಗಳನ್ನು ಖರೀದಿಸಿ ಹೂಡಿಕೆ ಮಾಡಿತ್ತು. ಆ ನಂತರ ಒಎನ್‍ಜಿಸಿ ವಿದೇಶ್ ಸೈಬೀರಿಯಾದಲ್ಲಿ ತೈಲ ನಿಕ್ಷೇಪದಲ್ಲಿ ತೈಲ ತೆಗೆಯುತ್ತಿದ್ದ ಇಂಪೀರಿಯಲ್ ಎನರ್ಜಿ ಕಂಪನಿಯನ್ನು ಖರೀದಿಸಿತು. ಆ ನಂತರ ಐಒಸಿ ಪೂರ್ವ ಸೈಬೀರಿಯಾದ ತಾಸ್ ಯುರಾಖ್ ತೈಲ ನಿಕ್ಷೇಪದದಲ್ಲಿ ಶೇ. 29.9 ರಷ್ಟು ಹೂಡಿಕೆ ಮಾಡಿದೆ.
ರಷ್ಯಾದ ಕಂಪನಿಗಳೂ ಭಾರತದಲ್ಲಿ ಹೂಡಿಕೆ ಮಾಡಿದ್ದು, 2017ರಲ್ಲಿ ರಷ್ಯಾದ ರಾಸ್‍ನೆಫ್ಟ್ ಗುಜರಾತ್‍ನ ವಾದಿನರ್ ನಲ್ಲಿ ತೈಲ ರಿಫೈನರಿ ಹೊಂದಿರುವ ಎಸ್ಸಾರ್ ಆಯಿಲ್ ಕಂಪನಿಯನ್ನು ಮತ್ತು ಅದರ 5500 ಪೆಟ್ರೋಲ್ ಪಂಪ್‍ಗಳನ್ನು 12.9 ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸಿತ್ತು.